ಸುರನದಿಯ ತೀರದಲಿ

ಸುರನದಿಯ ತೀರದಲಿ ಬೆಳ್ಳಿಗುಪ್ಪೆಗಳ ನಡುವೆ
ಹಸಿರು ಶಾಂತಿಯ ತಂಪು ಹರಡಿದಾಗ
ಎಷ್ಟರದು ಮೋಕ್ಷವದು ? ಕಾಲಡಿಯೆ ಸಿದ್ಧವಿದೆ
ಕೊರಲೆತ್ತಿ ಕರೆದಾಗ ಆತ್ಮರಾಗ ! || ಪ ||

ಆದರಿಲ್ಲಿಯ ಕಥೆಯ ಕೋಟಿಕೋಟಿಯ ವ್ಯಥೆಯ
ಹೇಳಿಕೇಳುವ ಭ್ರಾತೃ ಹೋಗಲಾಗದು ಹಾಗೆ ;
ಓರ್ವಗೆತ್ತಣ ಮೋಕ್ಷ ? ಕ್ಷುದ್ರವದು ಬಲು ಕ್ಷುದ್ರ
ರಾಷ್ಟ್ರಮುಕ್ತಿಯ ದೀಕ್ಷೆ ಕೈಗೊಂಡು ನಿಂತವಗೆ ! || 1 ||

ತಾಯ್ನೆಲದ ಧೂಳಿನೆಲೆ ತ್ಯಾಗಮಯ ಬಾಳಿನಲೆ
ಸವೆಯುತಿಹ ದಿವ್ಯಾತ್ಮದಾವರಣವಿದು ದೇಹ ;
ಕರ್ತೃತ್ವದೌನ್ನತ್ಯಕೇರೇರ್ದು ಕರಕರಗಿ
ಭಾರತವ ಬೆಸೆಯುತಿಹ ಬೆಳ್ನಗೆಯ ತಿಳಿಸ್ನೇಹ ! || 2 ||

ಅದಕೆಂದೆ ನಿಂತವರು ಅರವತ್ತು ತುಂಬಿದರು
ಯುವಜನಕೆ ಕಲಿಮನಕೆ ನವಚೇತನದ ಸ್ರೋತ;
ನಾಡಿಗಿಡಿ ಗಂಡುಗುಣ ಮೂಡಿಸಲು ನುಡಿಸುವರು
ಮಾಧವನು ಗಾಂಡೀವಿಗೊರೆದಮರ ಸಂಗೀತ ! || 3 ||

ಅಡಿಯಿಟ್ಟ ಕಡೆಯೆಲ್ಲ ಹೂವರಳಿ ನಗಬಹುದು
ತಲೆಬಾಗಿ ಕೈಮುಗಿದು ಜನ ನಿಲ್ಲಬಹುದು ;
ಆದರೂ ಬೇಕಿಲ್ಲ ಹೊಗಳಿಕೆಯ ಸುಮತಲ್ಪ
ನರರೂಪ ತಳೆದಂತೆ ವಜ್ರಸಂಕಲ್ಪ ! || 4 ||

Leave a Reply

Your email address will not be published. Required fields are marked *