ಪುಟ್ಟ ಶ್ಯಾಮ ಪುಟ್ಟ ಶ್ಯಾಮ

ಪುಟ್ಟ ಶ್ಯಾಮ ಪುಟ್ಟ ಶ್ಯಾಮ
ಬೆಟ್ಟವನ್ನೇ ಎತ್ತಿದಂಥ ಪುಟ್ಟ ಶ್ಯಾಮ
ಜಟ್ಟಿಗಿಂತ ಗಟ್ಟಿ ನಮ್ಮ ದಿಟ್ಟ ಶ್ಯಾಮ || ಪ ||

ಹುಟ್ಟಿ ಬಂದ ದೇವಕಿಯ ಗರ್ಭದಲ್ಲಿ
ಗುಟ್ಟಿನಿಂದ ಸಾಗಿಬಂದ ಬುಟ್ಟಿಯಲ್ಲಿ
ಕೆಟ್ಟ ಮಾವ ಕಂಸನ ಕಣ್ಣು ತಪ್ಪಿಸಿ
ಬಿಟ್ಟ ಬೀಡು ಗೋಕುಲದ ತೊಟ್ಟಿಲಲ್ಲಿ || 1 ||

ಹಟ್ಟಿಯಿಂದ ಗೋವುಗಳ ಅಟ್ಟಿ ಬಿಡುವ
ಕಟ್ಟ ಬಿಚ್ಚಿ ಕರುಗಳೊಟ್ಟಿಗಾಟವಾಡುವ
ಸಿಟ್ಟಿನಿಂದ ಪೆಟ್ಟು ಕೊಡುವೆನೆಂದು ಬಂದರೆ
ಕಿಟ್ಟ ತಾನು ಅಟ್ಟದಲ್ಲಿ ಅಡಗಿಕೊಳ್ಳುವ || 2 ||

ಬಿಚ್ಚಿಟ್ಟ ಬಟ್ಟೆಗಳ ಬಚ್ಚಿ ಇಡುವನೋ
ಮುಚ್ಚಿಟ್ಟ ಬೆಣ್ಣೆ ಮೊಸರು ಮುಕ್ಕಿ ಬಿಟ್ಟನೋ
ಚಚ್ಚಿ ಬಿಡುವೆ ಮಣ್ಣಗಟ್ಟಿ ತಿಂದೆ ಎಂದರೆ
ಬಿಚ್ಚಿಬಾಯಿ ತಾಯ್ಗೆ ಜಗವ ತೋರಿಬಿಟ್ಟನೋ || 3 ||

ಕೊಟ್ಟಿಗೆಯ ಕೇರಿಯ ಚಿಣ್ಣರನ್ನು
ಒಟ್ಟುಗೂಡಿಸಿ ದಟ್ಟಕಾಡು ಸುತ್ತಿಬಿಡುವ
ಕೆಟ್ಟ ಜುಟ್ಟು ಕಾಳಿಂಗ ಕಚ್ಚ ಬಂದರೆ
ಮೆಟ್ಟಿ ಹೆಡೆಯ ಚಪ್ಪಾಳೆ ತಟ್ಟುತಿರುವನೋ || 4 ||

ದುಷ್ಟಕಂಸ ರಕ್ಕಸನಾ ಸೊಕ್ಕು ಮುರಿದ
ಶಿಷ್ಟ ಜನರು ನಕ್ಕು ನಲಿಯುವಂತೆ ಮಾಡಿದ
ಕಷ್ಟನಷ್ಟ ಭ್ರಷ್ಟತೆಯ ಮಾಯಗೊಳಿಸಿ
ಇಷ್ಟ ಪೂರ್ತಿ ಮಾಡಿ ಜನರ ಮನವಗೆಲ್ಲಿದ || 5 ||

ಕಪ್ಪುಬಣ್ಣದವನೆ ಎಂದು ಕರೆಯಬೇಡಿ
ತಪ್ಪುಗಾರ ಸುಳ್ಳನೆಂದು ಜರೆಯಬೇಡಿ
ಒಪ್ಪಿ ಬಂದ ಶ್ಯಾಮನನ್ನು ತೊರೆಯಬೇಡಿ
ಅಪ್ಪಟ ಶ್ರೀಹರಿಯನೆಂದೂ ಮರೆಯಬೇಡಿ || 6 ||

One thought on “ಪುಟ್ಟ ಶ್ಯಾಮ ಪುಟ್ಟ ಶ್ಯಾಮ

  1. ಯಾವರೀತಿ ಹಾಡುಗಳನ್ನು ಡೌನ್ಲೋಡ್ ಮಾಡಬೇಕು

Leave a Reply

Your email address will not be published. Required fields are marked *