ನಾಡನೊಡೆದು ಗಾದಿ ಪಡೆದು

ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು
ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ;
ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು
ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ ||

ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ
ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ;
ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ
ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 ||

ಅಸುರಶಕ್ತಿಗೆದುರೆ ಇಲ್ಲ, ತಮದರಾಜ್ಯಕಳಿವೆ ಇಲ್ಲ
ಎನ್ನುತಿರುವೆ ಓ, ನಾಡ ಸೂತ್ರ ಹಿಡಿದ ಭೂತವೆ !
ನಿನ್ನ ಜನರ ಪ್ರೇತಗಣಕೆ, ಹರಣ, ಪರದುರಾಕ್ರಮಣಕೆ
ದೇಶದೊಡಲನೀಡುಮಾಡಿ ಕುಣಿವೆ ಓ ಸ್ವಾರ್ಥವೆ ! || 2 ||

ದಿಗ್ದಿಗಂತದೆಡೆಗೆ ನೋಡು, ಗಗನದೆಡೆಯ ಘೋಷ ಕೇಳು
ದೇವಸೇನೆ ಧಾವಿಸಿಹುದು, ದೂರವಿಲ್ಲ ಗೆಲುವಿಗೆ ;
ನಿನ್ನದೆಲ್ಲ ಕ್ಷಣಿಕ ಕುಣಿತ, ಓಡು ಮುಳುಗು ಕಡಲ ತಳಕೆ
ಭೂತಚೇಷ್ಟೆ ನಡೆಯದಿನ್ನು ತ್ಯಾಗಪುರುಷನೆದುರಿಗೆ ! || 3 ||

ಭರತಭುವಿಯ ಭಾಗ್ಯಶಿಲ್ಪಿ, ಸರ್ವಜಗದ ಗುರುಸ್ವರೂಪಿ
ಅಗದೆಂದು ಪ್ರಜ್ಞೆಯಿರದ ಸ್ವಾರ್ಥದೊಂದು ಭೂತವು ;
ಸ್ವತ್ವಪೂರ್ಣ ಸತ್ವಶಾಲಿ, ತಪದಮೂರ್ತಿ ಮಾಂತ್ರಿಕರಿಗೆ
ಮೀಸಲಹುದು ಧರ್ಮಧರೆಯನಾಳುವೊಂದು ಪೀಠವು ! || 4 ||

Leave a Reply

Your email address will not be published. Required fields are marked *