ನಾನೇರಿದೆತ್ತರಕ್ಕೆ

ನಾನೇರಿದೆತ್ತರಕ್ಕೆ ನೀನೇರ ಬಲ್ಲೆಯಾ?
ಕೇಳಿತೆ ಉತ್ತರದ ಮೇರು
ನನ್ನೊಡಲ ಗಾಂಭೀರ್ಯ ನಿನ್ನೊಳಗೆ ಇಹುದೇನು
ಕೇಳಿತೆ ಕಡಲ ನೀರು

ಮೇರುವಿನ ಸ್ಥೈರ್ಯ ಶರಧಿ ಗಾಂಭೀರ್ಯ
ಗಳಿಸಿರುವ ಪರಿ ಎನಗೆ ಹೇಳು || ಮಾಧವನೆ ||

ಆ ತಾಯ ಮಮತೆ ಈ ಸ್ನೇಹ ಕವಿತೆ
ಕಲಿಸಿದಳೆ ತಾಯಿ ತುಂಗೆ
ಜೊತೆಗೊಯ್ವ ಪ್ರೀತಿ ವಾಗ್ಝರಿಯ ರೀತಿ
ನೀಡಿದಳೆ ಸ್ಫೂರ್ತಿ ಗಂಗೆ

ಗಂಗೆಯ ಸ್ನಾನ ತುಂಗೆಯ ಪಾನ
ಸರಿಸಮವು ನೀನಿರಲು ನಮಗೆ || ಮಾಧವನೆ ||

ಆ ಬಾನು ಅವನು ಬೆಳಗುವನು ಬಾನು
ಉರಿದುರಿದು ತನಗೆ ತಾನು
ತನುವ ನೀ ದಂಡಿಸುತ ದೇಶದೇಕತೆ ಗೈದೆ
ನೀನವಗೆ ಸ್ಪರ್ಧಿಯೇನು ?

ನೀನುರಿವ ಭಾನು ಕಿರುಹಣತೆ ನಾನು
ಮಾಧವನೆ ನಿನಗೆ ಶರಣು || ಮಾಧವನೆ ||

Leave a Reply

Your email address will not be published. Required fields are marked *