ಹೂ ಹರೆಯದ ಹೊಂಗನಸುಗಳೆ

ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ
ಎಚ್ಚರಾಗಿ ಕನಸು ಕಂಗಳೆ || ಪ ||

ನೋವಿನಿರುಳು ನರಳಿ ನರಳಿ ಸರಿದಿದೆ
ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ ಕಾರ್ಯ ನಮ್ಮ ಎದುರಿದೆ
ಲೋಕ ನಮ್ಮ ನಿಲುವಿಗಾಗಿ ಕಾದಿದೆ
ಅಬಲ ಶಕ್ತಿಯಲ್ಲ, ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ || 1 ||

ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ
ವೀರ ವಾರಸಿಕೆಯೆ ಹಿಂದು ಸಂಕುಲ
ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟ್ರಶಕ್ತಿಗದುವೆ ಹಿನ್ನೆಲೆ || 2 ||

ಸೋಲಿನಸುರ ಹೊಂದಬೇಕು ಅವನತಿ
ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ
ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ
ಛಲದಲಿ ಒಂದಾಗಿ ಜಗದಲಿ ಮುಂದಾಗಿ
ನಿಲುವುದೊಂದೆ ನಮ್ಮ ಮುನ್ನೆಲೆ || 3 ||

Leave a Reply

Your email address will not be published. Required fields are marked *