ಆವಿನದು ನೊರೆಹಾಲನೊಲ್ಲೆನು (ರಚನೆ – ಸಾಲಿ ರಾಮಚಂದ್ರರಾಯರು)

ಆವಿನದು ನೊರೆಹಾಲನೊಲ್ಲೆನು
ದೇವಲೋಕದ ಸುಧೆಯನೊಲ್ಲೆನು
ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು |
ಪಾವನಳೆ ನಿನ್ನಂಘ್ರಿಕಮಲದ
ಸೇವೆಯದು ದೊರೆತಿಹುದು ತಾಯೇ
ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ || 1 ||

ಬರಲಿ ಸಿರಿವಂತಿಕೆಯ ಜನ್ಮವು
ಬರಲಿ ಕಡುಬಡತನದಿ ಇಲ್ಲವೆ
ಇರದು ಚಿಂತೆಯು ತಾಯೇ ನಿನ್ನುದರದಲಿ ಜನಿಸುವುದೇ |
ಪರಮ ಭಾಗ್ಯವು ಎಂಬುದರಿಯನೆ
ಮರೆಯದಲೆ ಪ್ರತಿ ಜನ್ಮದಲಿ ಶ್ರೀ –
ಧರನು ದಯೆಯಿಂದೆನಗೆ ನೀಡಲಿ ನಿನ್ನ ಸೇವೆಯನು || 2 ||

ಇರಲೆನಗೆ ಕರಕನ್ನವುಣ್ಣಲು
ಬರಿಯ ನೆಲವಿರಲೆನಗೆ ಮಲಗಲು
ಹರಕು ಬಟ್ಟೆಗಳೆನ್ನ ಮೈಯ್ಯನು ಮುಚ್ಚಲಿರಲೆನಗೆ |
ಮುರುಕು ಗುಡಿಸಲು ಇರಲಿ ವಾಸಕೆ
ಸಿರಿಯರಸ ಮತ್ತೇನ ಬೇಡೆನು
ಭರತ ಭೂಮಿಯೊಳಿರುವುದೇ ಎನಗೊಂದು ಸುಖವಿಹುದು || 3 ||

ಧನವ ಬೇಡೆನು ನಾನು ನಾರಾ-
ಯಣನೆ ಸನ್ಮಾನವನು ವಿದ್ವ –
ಜ್ಜನರ ಸಭೆಯಲಿ ಬೇಡೆನೈ ನಾ ಬೇಡೆ ಕೀರ್ತಿಯನು |
ಕನಸುಮನಸಿನಲಿರಲಿ ಕರುಣಾ –
ಘನನೆ ಧ್ಯಾನವು ಜನ್ಮಭೂಮಿಯ
ತನುವು ಸವೆಯುತಲಿರಲಿ ಹಗಲಿರುಳವಳ ಸೇವೆಯಲಿ || 4 ||

Leave a Reply

Your email address will not be published. Required fields are marked *