ಯಾವ ತಾಯ ನೆನೆಯಬೇಕು ನಾವು ಅನುದಿನ
ನೋವ ಮರೆಸಿ ನಲಿವು ನೀಡೋ ದಿವ್ಯ ಚೇತನ || ಪ ||
ಜನಮ ನೀಡಿ ತನ್ನ ಎದೆಯ ಅಮೃತವಿತ್ತಳು
ನಡೆಯ ನುಡಿಯ ಕಲಿಸಿ ಜಗದಿ ಬಾಳಲಿಟ್ಟಳು
ಮೊದಲ ಗುರುವು ತಾನೇ ಆಗಿ ಬೆಳಕು ತೋರುತ
ಮನಸುತುಂಬಿ ಹರಸುತಿರುವ ಜನನಿ ಮಾನ್ಯಳು || 1 ||
ಕಸವ ತಿಂದು ರಸವ ಮಾಡಿ ನಮಗೆ ಉಣಿಸುವ
ಹಸುವು ಕಾಮಧೇನು ಸದಾ ನಮ್ಮ ತಾಯಿಯು
ಸಕಲ ಜೀವರಾಶಿಗಳಿಗೆ ಮೂಲಭೂತಳು
ಪುಣ್ಯವಂತೆ ಜೀವಗಂಗೆ ಶ್ರೇಷ್ಠ ತಾಯಿಯು || 2 ||
ತಪ್ಪುಗಳನು ತಿದ್ದಿ ತೀಡಿ ಬುದ್ಧಿ ಬೆಳೆಸುವ
ಬರ್ಪ ಕಷ್ಟಗಳಿಗೆ ಮನವ ಸಿದ್ಧಗೊಳಿಸುವ
ಅರಿವಿನೆಡೆಗೆ ಮುನ್ನಡೆಸುವ ಗುರುವೆ ತಾಯಿಯು
ಗುರುವಿಗೂ ಸುಜ್ಞಾನವಿತ್ತ ಪ್ರಕೃತಿ ಮಾತೆಯು || 3 ||
ಜನನಿ ಗೋವು ಗಂಗೆ ಗುರು ಪ್ರಕೃತಿ ಮಾತೆಗೆ
ಜನನ ಮರಣಗಳಿಗೆ ಸಾಕ್ಷಿಯಾಗಿ ನಿಂದಿಹ
ಹತ್ತು ಹಲವು ಕಷ್ಟ ಸಹಿಸಿ ನಮ್ಮ ಪೊರೆಯುವ
ಮಾತೃಭೂಮಿ ಜಗನ್ಮಾತೆ ಮಹಾಮಾತೆಯು || 4 ||