ವ್ರತವ ತೊಡುವ ಬನ್ನಿ
ಸೇವಾ ವ್ರತವ ತೊಡುವ ಬನ್ನಿ || ಪ ||
ಹೃದಯ ಹೃದಯಕೆ ಬೆಸುಗೆಯ ಹಾಕುವ
ಅಸ್ಥಿರ ಬದುಕನು ಸಾರ್ಥಕಗೊಳಿಸುವ
ನೊಂದು ಬೆಂದವರ ತೊಂದರೆ ನೀಗುವ
ಎಲ್ಲೆಡೆ ಸ್ನೇಹದ ಲತೆಯನು ಬೆಳೆಸುವ || 1 ||
ಉನ್ನತ ಪದವಿಯ ಗೊಂದಲವಿಲ್ಲ
ಧನಕನಕವೇ ಇಲ್ಲಿ ಪ್ರಧಾನವಲ್ಲ
ಜಾತಿ ವರ್ಣವನು ಕೇಳುವುದಿಲ್ಲ
ರೂಪಕೆ ಧೂಪವ ಹಾಕುವುದಿಲ್ಲ || 2 ||
ಅಂತರಂಗದಾ ಸಿರಿ ಹೊಂದಿರಬೇಕು
ಅಂತರ ತೋರದ ಆಂತರ್ಯ ಬೇಕು
ನಾನೆಂಬುದನು ಕಡೆಗಾಣ ಸಬೇಕು
ತನುಮನದಲಿ ಬಲವುಕ್ಕಲೇ ಬೇಕು || 3 ||
ಮಾತಲಿ ಮಮತೆಯು ತುಂಬಿರಬೇಕು
ಸೇವೆಗೆ ಸಹನೆಯ ಇಂಬಿರಬೇಕು
ಕೀರ್ತಿಯ ಆಮಿಷ ಬಿಟ್ಟಿರಬೇಕು
ನಿಂದೆಗೆ ನೋಯದ ಮನವಿರಬೇಕು || 4 ||
ಸೇವೆ ಎಂಬುದು ಕಾಯಕ ನಮ್ಮದು
ಮಾನವ ಜನ್ಮಕೆ ಅರ್ಥವ ಕೊಡುವುದು
ಸೇವೆಯು ಕೊಡುವ ತೃಪ್ತಿಯು ಹಿರಿದು
ಸಮಾಜಕೆ ದುಡಿಯದ ಜೀವನ ಬರಿದು || 5 ||