ವಿಶ್ವಕೆ ಹೊಸತನ ನೀಡಿದ ಮಣ್ಣಲಿ

ವಿಶ್ವಕೆ ಹೊಸತನ ನೀಡಿದ ಮಣ್ಣಲಿ
ಜನಿಸಿದ ನಾವೇ ಧನ್ಯ
ಉಳಿಯಲಿ ಬೆಳೆಯಲಿ ಅನುದಿನ ನಲಿಯಲಿ
ನವ ಉನ್ಮೇಷದ ತಾರುಣ್ಯ || ಪ ||

ಹದಿಹರೆಯದ ಬಿಸಿನೆತ್ತರ ಹರಿವಲಿ
ಪುಟಿದೇಳಲಿ ಯುವ ಚೈತನ್ಯ
ಮೈಮನಗಳ ಕೊಳೆ ಕೊಡವುತ ಕೊಡವುತ
ಹೊರಹೊಮ್ಮಲಿ ಚಿರ ಜಾಗರಣ
ಮುಗಿಲೆತ್ತರ ಬಾನೆತ್ತರ ಏರಲಿ
ಭಾವೋನ್ಮೇಷದ ಸ್ಪುರಣಾ……|| 1 ||

ಉಕ್ಕುತ ಹರಿಯುವ ಜ್ಞಾನದ ತೊರೆಯಲಿ
ಈಜಾಡುವ ಹುರುಪಿನಲಿ
ರೋಷದಿ ಕ್ಲೇಶದಿ ಸಾಧನೆಯಿರದು
ಧ್ಯೇಯದ ಕಡೆ ಗುರಿಯಿರಲಿ
ಸೃಜನಾತ್ಮಕ ರಚನಾತ್ಮಕ ಕಾರ್ಯಕೆ
ಮನದಲಿ ಶತ ಶ್ರಮವಿರಲಿ || 2 ||

ದಾಸ್ಯದ ಕಳೆಯನು ವಿಕೃತಕೊಳೆಯನು
ಬಿಸುಡು ಮುನ್ನಡೆಯೋಣ
ತಾಯ್ನೆಲದೊಲವಿನ ಬಂಧವನರಿಸುತ
ಯುವಮನ ಜಾಗೃತಿಗೈಯೋಣ
ಬಂಧುತ್ವದ ಭ್ರಾತೃತ್ವದ ತೇರನು
ವಿಶ್ವದ ಎಲ್ಲೆಡೆ ಎಳೆಯೋಣ || 3 ||

Leave a Reply

Your email address will not be published. Required fields are marked *