ವಿಜಯದಾಯಿ ಸಂಕ್ರಾಂತಿಯಿದು || ಪ ||
ನವ ರವಿ ಬೆಳಗು ಪಾವನ ಶುಭದಿನ
ತೊಳೆಯುತ ತನುಕೃತಿ ವಾಙ್ಮತಿ ಹೃನ್ಮನ
ದೋಷವ ಕಳೆಯುತ ನಿರ್ಮಲಗೊಳಿಸಿ
ವ್ರತ ಕೈಗೊಳ್ಳುವ ಕಾಲವಿದು || 1 ||
ಗೌರವ ವೈಭವ ಕಲಿತನ ಧೀಧನ
ಚಿರ ಸುಖ ತುಂಬಿದ ಇತಿಹಾಸದ ಘನ
ಪುನರಪಿ ಪಡೆಯಲು ಮೇಲ್ಮೆಯಗಳಿಸಿ
ಕದಲದೆ ಕಾದುವ ಕಾಲವಿದು || 2 ||
ಗುರಿ ಸಾಧಿಸುತಿಹ ವರವ್ರತಿಯೋಧನ
ಕೊರಗಿದ ಆಶೆಯ ಪುನರುಜ್ಜೀವನ
ನೂತನ ಸ್ಫೂರ್ತಿಯ ಧೈರ್ಯವ ಬೆಳೆಸಿ
ದುಂದುಭಿ ಮೊಳಗಿಪ ಕಾಲವಿದು || 3 ||
ಬೆದರಿದ ಹೆದರಿದ ಪೀಡಿತ ಜನಮನ
ಹತಾಶ ಕಾರ್ಮುಗಿಲಿನ ತಮಭಂಜನ
ಶಾಂತ ನಭದಲೀ ಯಶಪ್ರಭೆ ಹರಿಸಿ
ಜಯರವಿ ಬಹ ಸಂಕ್ರಾಂತಿಯಿದು || 4 ||