ಉತ್ತಿಷ್ಠ ಭಾರತ – ಕೋಟಿ ಹೃದಯ ಧಮನಿಗಳಲಿ

ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು
ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು
ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ
ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ |
ಅಸುರೆದೆಗಳು ಬಿರಿಯಲಿ |
ಸುರಭಾವಗಳರಳಲಿ |
ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ |
ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ ||

ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ?
ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ?
ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ?
‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ |
ಉಜ್ವಲ ಗತಸಿರಿಯಿದೆ |
ಶೌರ್ಯದ ಸ್ಮೃತಿಯೆಮಗಿದೆ |
ಗೆಲುವಾಗಲಿ, ನಲಿವಾಗಲಿ, ಹಳೆ ಬೇರದು ಚಿಗುರಲಿ |
ಎದ್ದೇಳಿರಿ, ಕೈಜೋಡಿಸಿ, ಭರತಾಂಬೆಯು ಬೆಳಗಲಿ ||

ಮುಗಿಲು, ಕಡಲು ಮೀರಿ ಮೆರೆದ ಸಂಸ್ಕೃತಿಯಿದೆಯೆಮ್ಮಲಿ
ಮುನ್ನಡೆದೆವು, ಜಯ ಪಡೆದೆವು ನವನವೀನ ಯುಗದಲಿ
ಭ್ರಷ್ಟ-ದುಷ್ಟ ಶಕ್ತಿಗಳಿದೊ ಕೆದರಿ, ಗದರಿ ಬರುತಿವೆ |
ಸಿಡಿದು, ಕಡಿದು ನರಮೇಧದ ಕರಿಛಾಯೆಯ ಹರಡಿವೆ |
ಛಲ-ಬಲವಿದೆಯೆಮ್ಮಲಿ |
ಶೌರ್ಯಪುಟಿದು ಚಿಮ್ಮಲಿ |
ಸಿಡಿದೇಳುವ ಕಡಿದೊಗೆಯುವ ಕ್ರೌರ್ಯಾಸುರ ಕಂತಲಿ
ಮೊಗಮೊಗದಲಿ ನಗೆ ಚಿಮ್ಮಲಿ ಜಯಗಾನವು ಮೊಳಗಲಿ

Leave a Reply

Your email address will not be published. Required fields are marked *