ಉಜ್ವಲ ಮಹಿಮೆಯ ಕಣಕಣ ಪಡೆದಿಹ

ಉಜ್ವಲ ಮಹಿಮೆಯ ಕಣಕಣ ಪಡೆದಿಹ ಮಣ್ಣಿನ ಮಕ್ಕಳೆ ಮೇಲೇಳಿ
ಮಾನವ್ಯತೆ ದೇವತ್ವದ ಧರಿಸಿದ ಚರಿತೆಯ ಮೂಡಲಿ ಮೈತಾಳಿ || ಪ ||

ತಿಮಿರವ ತುಳಿಯುತ ಪರಾನುಕರಣೆಯ ಬೆನ್ನಿಗೆ ಮೂಡಿಸಿ ಪದಚಿಹ್ನೆ
ಆರಾಧಿಪ ಬನ್ನಿರಿ ಜ್ಞಾನ ಶೀಲ ಭಾರತದೇಕಾತ್ಮತೆಯನ್ನೆ
ತಾಯ್ನೆಲದಭಿಮಾನದ ಶ್ರುತಿ ಹೊಮ್ಮಿಸಿ ಹೃದಯದ ಭೇರಿಯ ನುಡಿಸೇಳಿ || 1 ||

ಮೈಮನದೊಳಗಾಂತರ್ಯದ ಸ್ಫೂರ್ತಿಯು ಹರಿದವತರಿಸಲಿ ನವಯುಗವು
ಜಡತೆಗೆ ಚೇತನ ತುಂಬುತ ಹೊಮ್ಮಲಿ ಭಾರತದತಿ ದಿವ್ಯತೆಯರಿವು
ಆತ್ಮದ ಅಮರತ್ವವ ಅನುಭವಿಸುತ ಸ್ವದೇಶಕೊಳಿತನು ತರಲೇಳಿ || 2 ||

ಹೃದಯದೊಳುದಿಸುವ ಪಾವನ ಭಾವನೆ ಜಗ ನಿರ್ಮಲಗೊಳಿಸುವ ಮನಸು
ವಿಶ್ವವನೆಲ್ಲವ ಆರ್ಯತೆಗೇರಿಸಿ ಅಸುರತೆ ಗೆಲ್ಲುವ ಸವಿಗನಸು
ಇಹದೊಳು ಸಾಕಾರದೊಳರಳಲು ಬಲಸಂಪನ್ನತೆ ಗಳಿಸೇಳಿ || 3 ||

ಸ್ವಾತಂತ್ರ್ಯದ ಗಾಳಿಯ ಉಸಿರಾಡುತ ನಿಶಿದಿನ ಒಳಹೊರಗೆಲ್ಲೆಡೆಯು
ಉಪನಿಷದೋಕ್ತಿಯ ನಿರ್ಭಯ ಶಕ್ತಿಯ ಗಳಿಸುವುದಾಗಲಿ ನಡೆನುಡಿಯು
ಅಜ್ಞಾನದ ತಿಮಿರದ ಶಿರ ಮೆಟ್ಟುತ ಜ್ಞಾನ ಪ್ರಭಾತವ ಸೃಜಿಸೇಳಿ || 4 ||

ನೀಲಾಗಸ ಜನಮಾನಸ ಕರೆದಿದೆ ಭಾರತದೊಡಲಿನ ಹರಕೆಯಿದೆ
ಮುನ್ನುಗ್ಗುತ ಗೆಲವನು ಬರಸೆಳೆಯುವ ದೃಢಶ್ರದ್ಧೆಯ ಮನದರಕೆಯಿದೆ
ಭಗವಂತನಿಗಾತ್ಮೀಯರು ನಾವು, ದೇವರ ಕಾರ್ಯಕೆ ಪುಟಿದೇಳಿ || 5 ||

Leave a Reply

Your email address will not be published. Required fields are marked *