ಉಘೇ ವೀರಭೂಮಿಗೆ, ಉಘೇ ಉಘೇ ಉಘೇ ಉಘೇ
ಉಘೇ ವೀರಭೂಮಿಗೆ
ಕಹಳೆ ಶ್ರುತಿಗೆ ರುದ್ರ ಕೃತಿಗೆ,
ಸಮರರಂಗದಮರ ಸ್ಮೃತಿಗೆ || ಪ ||
ಎತ್ತರೆತ್ತರೆತ್ತರಕ್ಕೆ ಏರಲೆಮ್ಮ ಬಾವುಟ
ಉತ್ತರುತ್ತರುತ್ತರಕ್ಕೆ ಬೆಳೆಯಲೆಮ್ಮ ಭೂಪಟ
ಯೋಧವಸ್ತ್ರ ಹೆಗಲಶಸ್ತ್ರ ಧರಿಸಿ ಜನ್ಮ ಭೂಮಿಗೆ || 1 ||
ಅಗ್ನಿವರ್ಷ ಶೌರ್ಯಸ್ಪರ್ಶ ತೈಲಶಕಟ ಸಾವಿರ
ಸಾಲು ಸಾಲು ಬೂಟುಕಾಲು ನಡೆವ ಸೈನ್ಯ ಸಾಗರ
ಬಾಳಿನೆಲ್ಲ ರುಧಿರವೆಲ್ಲ ಕುದಿವ ದೃಶ್ಯ ಸೇಡಿಗೆ || 2 ||
ಹೊರಟಿತಿದೋ ಅಜಿಂಕ್ಯಸೇನೆ ರಾಷ್ಟ್ರಕಿದುವೆ ರಕ್ಷಣೆ
ರಣಪ್ರಯಾಣ ವಿಜಯಗಾನ ವಿಮಾನಯಾನ ಗರ್ಜನೆ
ತಾಯ ಭಕ್ತಿ ತೋಳಶಕ್ತಿ ಇದು ಸ್ವದೇಶದುಳಿವಿಗೆ || 3 ||
ರಾಷ್ಟ್ರಯಜ್ಞದುರಿಯ ದಾಹ ತೀರಲೆಂದು ಇಂದಿಗೆ
ಶಸ್ತ್ರಪೂಜೆಯಾಗಲೆಂದು ವೈರಿ ಪ್ರಾಣದೊಂದಿಗೆ
ಕ್ಷಾತ್ರಭಾವ ಕೆರಳುತಿಹುದು ರಕ್ತದರ್ಘ್ಯ ಗಳಿಕೆಗೆ || 4 ||