ತಾಯಿ ಕಾದಿಹಳಿಂದು ಆ ನರೇಂದ್ರನಿಗಾಗಿ

ತಾಯಿ ಕಾದಿಹಳಿಂದು ಆ ನರೇಂದ್ರನಿಗಾಗಿ
ಸಿಂಹಸದೃಶನಿಗಾಗಿ ಓ ಧೀರರೇ
ಸ್ವಾರ್ಥವನು ಕಿತ್ತೊಗೆದು ಸರ್ವಸ್ವವನು ಸುರಿದು
ನಿಲ್ಲಬಲ್ಲಿರೇ ಭರತದೇಶಾತ್ಮರೇ || ಪ ||

ಜನಿಸಿ ಕಲಕತ್ತೆಯಲಿ ರಾಮಕೃಷ್ಣರ ಶಿಷ್ಯ
ಸುತ್ತಿದನು ಭಾರತವ ಬರಿಗಾಲಲಿ
ರಾಷ್ಟ್ರ ಪರಪದತಳದಿ ನರಳುವುದ ತಾ ಕಂಡು
ಹರಿಕಾರನಾದನಾ ಸಂಕ್ರಾಂತಿಗೆ || 1 ||

ಹಿಂದು ಸತ್ವೋನ್ನತಿಯ ವಕ್ತಾರ ತಾನಾಗಿ
ಮಿತ್ರನಾದನು ವಿಶ್ವವೇದಿಕೆಯಲಿ
ಸಂದ ಗೌರವ ಸಿದ್ಧಿಯಾಪದವಿಯೆಲ್ಲವನು
ಅರ್ಪಿಸಿದ ಭಾರತಿಯ ಪಾದಾಬ್ಜಕೆ || 2 ||

ಆ ಮಹಾತ್ಮನ ತನುವು ಮನ ಧನ
ದಗ್ಧವಾಯಿತು ದೇಶದುದ್ಧಾರಕೆ
ವಿಶ್ವಗುರು ಭಾರತವನೆಚ್ಚರಿಸುವಾ ಕನಸ
ನನಸಾಗಿಸುವ ಬಾ ಓ ಗೆಳೆಯನೇ || 3 ||

ಜೀವ ಬ್ರಹ್ಮವು ಅವನೆ ಮಾಧವ
ಮಾಡುತಾತನ ಸೇವೆಯ
ಪಡೆವ ಮಾನವ ಮುಕ್ತಿಪದವನು
ಗಳಿಸುತಂತಃಶಕ್ತಿಯ || 4 ||

ಏಳು ಎದ್ದೇಳು ನೀ ಕ್ಲೈಬ್ಯವನು ಸುಟ್ಟುರುಹು
ಶಕ್ತಿಯುತ ನೀನಾಗು ಶೂರನಾಗು
ಪರಹಿತದ ಬದುಕೇ ನಿಜವಾದ ಬದುಕಹುದು
ಕಾಮ ಕಾಂಚನದೆದುರು ವಿಜಯನಾಗು || 5 ||

ಎಂದು ಗುಡುಗುತ ದೇಶವೆಚ್ಚರಿಸಿದಾತನಿಗೆ
ಮೂರು ಶತವಾಯನಗಳು ಸಂದವಿಂದು
ಆತನಿಚ್ಛೆಯ ಕೃತಿಗೆ ಬದಲಿಸುವಿರೇ ನೀವು
ಧನ್ಯವಾಯಿತು ನಿಮ್ಮ ಜನ್ಮವಂದು || 6 ||

Leave a Reply

Your email address will not be published. Required fields are marked *