ತಾಯೆ ಭಾರತಿ ನಿನ್ನ ಮೂರುತಿ
ಎದೆಯ ಗುಡಿಯೊಳಿಟ್ಟು ಭಜಿಸಿ ಜ್ವಲಿಪೆನಾರತಿ || ಪ ||
ಜಗಕೆ ಮೊದಲ ಜ್ಞಾನ ಕಿರಣದಾತ್ರಿ ಎಂಬ ಕೀರುತಿ
ಪ್ರೇಮ ಶಾಂತಿ ಸ್ನೇಹಗಳಲಿ ಸದಾ ನಿನ್ನ ಅನುರತಿ
ಆತ್ಮದೀಕ್ಷೆ ನೀಡಿ ಜನರ ತಮವ ಕಳೆವ ಸತ್ಕೃತಿ
ಮರ್ಮವರುಹಿ ವಿಶ್ವಕ್ಕೆಲ್ಲ ಮಾರ್ಗ ತೋರುತಿ || 1 ||
ತಾಯೆ ನಿನ್ನ ಉದರದಲ್ಲಿ ಬಂದ ರಾಮ ರಘುಪತಿ
ಪಾಂಚಜನ್ಯ ಮೊಳಗಿ ಗೀತೆಯೊರೆದ ಪಾರ್ಥಸಾರಥಿ
ವ್ಯಾಸ ಬುದ್ಧ ಮಧ್ವ ಬಸವ ಶಂಕರಾದಿ ಋಷಿಯತಿ
ಶಿವ ಪ್ರತಾಪರೆಮಗೆ ವಂದ್ಯ ಶೌರ್ಯ ಸಂತತಿ || 2 ||
ಹರಸುತಾಯೆ ಧ್ಯೇಯಪಥದಿ ಸಾಗಲೆಮ್ಮ ನಲ್ಮತಿ
ಎಮ್ಮ ಹಿರಿಯರಂತೆ ನಿನ್ನ ಸೇವೆಗೈಯ್ಯೆ ಸಮ್ಮತಿ
ನಮನ ತಾಯೆ ಶಕ್ತಿ ನೀಡೆ ಲಕ್ಷ್ಮಿದುರ್ಗಿ ಸರಸ್ವತಿ
ನಿನ್ನ ಹಿರಿಮೆ ಗರಿಮೆಗೆನ್ನ ಪ್ರಾಣದಾಹುತಿ || 3 ||