ಸ್ವಾತಂತ್ರ್ಯದ ಅರುಣೋದಯ ಸಾರುತ ಹಾರುತ ಧ್ವಜ ಭಗವಾ
ದಾಸ್ಯದ ಇರುಳಿಗೆ ಪಂಜಾಗುರಿಯುತ ಬೆಳಬೆಳಗಿತು ನಭವ || ಪ ||
ಸ್ವತಂತ್ರ ಗಡಗಳ ಗುಡಿಗೋಪುರಗಳ ತಲೆತಲೆಗಳ ಮೇಲೆ
ಕೃಪಾಛಾಯೆಯದೋ ಸಿಂಧು ಸಮುದ್ರದ ಅಲೆ ಅಲೆಗಳ ಮೇಲೆ
ಅರಮನೆ ಗುರುಮನೆ ಜನತಾ ಕೋಟಿಯ ಮನೆ ಮನೆಗಳ ಮೇಲೆ
ಗಡಿನಾಡಿನ ತುದಿಕೋಡಿನ ಪಹರೆಯ ನೆಲೆ ನೆಲೆಗಳ ಮೇಲೆ || 1 ||
ಪ್ರಾಣ ಪುಷ್ಪಗಳ ಕಾಣಿಕೆಯೊಯ್ಯುವ ಶೂರರ ಹೆಗಲಿನಲಿ
ಮಹಾ ಪರಾಕ್ರಮಿ ಮಾವಳಿಯೋಧರ ಭೀಮ ಬಾಹುಗಳಲಿ
ಆನಂದದ ಶುಭ ಸಂವತ್ಸರದಲಿ ಸಿಂಹಾಸನವೇರಿ
ಸ್ವರಾಜ್ಯ ಸ್ಥಾಪಕ ಶಿವಪ್ರಭು ಗಳಿಸಿದ ಶಾಶ್ವತ ಕೀರ್ತಿಸಿರಿ || 2 ||