ಸ್ವಾರ್ಥರಹಿತ ಕ್ರಾಂತಿ ಎನುವ ವಿಜಯಗಾನ ಮೊಳಗುವಾ
ದೇಶಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸುವಾ || ಪ ||
ನೊಂದಮನದ ತಾಯಕರೆಗೆ ಧಿಗ್ಗನೆದ್ದು ನಿಲ್ಲುವಾ
ಬೆಂದ ಒಡಲ ಉರಿಯ ಬೇಗೆಯನ್ನು ಶಮನಗೊಳಿಸುವಾ
ತಾಯ ಶಿರವ ತರಿಯ ಬಂದ ಅರಿಯ ಅಂತ್ಯಗೊಳಿಸುವಾ
ಆಕೆ ಘನತೆಗೆಂದು ಕುಂದು ಬಾರದಂತೆ ಸೆಣಸುವಾ || 1 ||
ಶೌರ್ಯ ಮೆರೆದ ನಾಡಿನಲ್ಲಿ ಹೇಡಿತನವು ಸಲ್ಲದು
ಕಾರ್ಯಕ್ಷೇತ್ರ ಕೂಗಿಕರೆಯೆ ಕಿವುಡುತನವು ಕೂಡದು
ಕ್ರೌರ್ಯ ಕಪಟ ಕುಟಿಲನೀತಿ ಜನತೆಯಿನ್ನು ಸಹಿಸದು
ಧೈರ್ಯದಿಂದ ಎದ್ದುನಿಲಲು ದುರುಳರಾಟ ನಡೆಯದು || 2 ||
ಮಸುಕುಗೊಂಡ ಧವಳಕಾಂತಿ ಮತ್ತೆ ಇಂದು ಬೆಳಗಲಿ
ಭೇದಭಾವ ಮರೆತು ಎಲ್ಲ ಒಂದೇ ಗುರಿಯ ಸೇರಲಿ
ಹುಲ್ಲೆಯಲ್ಲ ಹುಲಿಗಳೆಲ್ಲ ಎಂದು ಜಗವು ಅರಿಯಲಿ
ಧರೆಯಲೆಲ್ಲ ಭರತಖಂಡ ತಲೆಯನೆತ್ತಿ ಮೆರೆಯಲಿ || 3 ||