ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ
ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ || ಪ ||
ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ
ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ
ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ || 1 ||
ಬಾಹುದ್ವಯಕೇರಲಿ ಭೂಭಕ್ತಿಯ, ಚಿರಶಕ್ತಿಯ ನವ ಶರಸಂಚಾರ
ಕದನದಿ ಕೊಲೆಯಾಗಲಿ ಬಲಿಯಾಗಲಿ, ಆಗಲಿ ಅರಿವಂಶದ ಸಂಹಾರ
ವಾಯುವ್ಯದೊಳೀಶಾನ್ಯದೊಳೆಲ್ಲೆಡೆ ಮುನಿದೇಳಲಿ ಋಷಿ ಮುನಿಜನಭೂಮಿ || 2 ||
ಕೆಚ್ಚಿನ ಕಾಳ್ಗಿಚ್ಚಿನ, ಮೈಬೆವರಿನ, ಕೆನ್ನೆತ್ತರಿನಭಿಷೇಕದಿ ನೆನೆದು
ಉದ್ದಗಲಕು ಅಡಿಗಡಿಗೋರೋರ್ವರು, ರಣಭೈರವನವತಾರವ ತಳೆದು
ಏಳಲಿ, ಜನಶಕ್ತಿಯು ಮೇಲೇಳಲಿ, ಜೈಸುಗೆ ಈ ಮೃತ್ಯುಂಜಯ ಭೂಮಿ || 3 ||