ಸುಂದರ ಸೊಬಗಿನ ರಮ್ಯ ರಮಣೀಯ, ನಂದನವನವಿದು ಭಾರತವು
ಕಾವೇರಿ ಗಂಗಾ ಯಮುನೆಯು ಹರಿಯುವ, ಬೃಂದಾವನವಿದು ಭಾರತವು || ಪ ||
ಹಿಮವತ್ಪರ್ವತ ಮಾನಸ ಸರಸಿನ, ಕೈಲಾಸವಾಸಿಯ ಕರುಣೆಯಿದು
ಮೂರು ಸಾಗರದ ಸಂಗಮದಂಚಿನ, ನಿತ್ಯ ನೂತನ ಧರಣಿಯಿದು
ಮಾನವ ಕುಲದ ಮೌನ ಸಂಜೀವಿನಿ, ಲೋಕ ಪಾವನಿ ಭಾರತವು || 1 ||
ವೇದ ವೇದಾಂತದ ಉಪನಿಷದಾಗರ, ಮಹಾಕಾವ್ಯಗಳ ತವರಿದುವು
ತತ್ವ ಚಿಂತನದ ಜ್ಞಾನ ಜೀವನದ, ಮಾರ್ಗದರ್ಶಿ ಚಿರಸತ್ಯವಿದು
ಅನಂತ ಕಾಲದ ಸಾಕ್ಷ್ಯ ಮೋಕ್ಷದ, ತಪೋವರ್ಧಿನಿ ಭಾರತವು || 2 ||
ರಾಮಕೃಷ್ಣರ ರಾಜಸನಾಡಿದು, ಯುಗಯುಗ ತೊಳಗಿ ಬೆಳಗಿಹುದು
ಕಣಕಣ ನೆಲದಿ ಕ್ಷಣಕ್ಷಣದಿರುವು, ಮನಮನದಾಂತರ್ಯ ತೊಳೆದಿಹುದು
ಬಾಳ ಬದುಕಿನ ಚೇತನ ಚಿಲುಮೆ, ದಿವ್ಯತೆ ವಾಹಿನಿ ಭಾರತವು || 3 ||
ಸ್ವರ್ಗ ಸಮಾನ ನನ್ನೀ ಭೂಮಿ, ಹೃದಯದ ಆರಾಧ್ಯ ದೈವವಿದು
ಆಸೆ ಆಕಾಂಕ್ಷೆ ಹಂಬಲ ಬದುಕಿಗೆ, ನೀಡುವ ಸೌಭಾಗ್ಯ ಭವ್ಯವಿದು
ತ್ಯಾಗ ಸೇವೆಯ ದುಡಿಮೆ ಹಿರಿಮೆಗೆ, ಸ್ಫೂರ್ತಿದಾಯಿನಿ ಭಾರತವು || 4 ||