ಶ್ರೀಗುರು ಭಗವೆಯ ದರುಶನದೀಕ್ಷಣ
ಜಾಗೃತಗೊಂಡಿತು ಕರ್ತೃತ್ವ
ಭಾವಪುಟಗಳಲಿ ಭೂಪಟವರಳಿತು
ಮಣ್ಣಿನೊಳುದಿಸಿತು ಮಾತೃತ್ವ || ಪ ||
ಭಗವೆಯ ಮೌನದ ಭಾಷೆಗೆ ಭಾಷ್ಯವು
ಋಷಿಗಳ ಬದುಕಿನ ರೀತಿ
ಅಸಿಧಾರಾ ವ್ರತ ಜೀವನ ನಡೆಸಿದ
ಮಹೋನ್ನತ ತ್ಯಾಗದ ನೀತಿ || 1 ||
ದಿಟದಿತಿಹಾಸದ ಪುಟಪುಟ ತುಂಬಿದೆ
ಛಲ-ಬಲ- ವಿಕ್ರಮ ಚರಿತೆ
ಶತಶತಮಾನದ ಕಥನವ ಬರೆದಿದೆ
ಹಿಂದುತ್ವದ ಜೀವನ ಸರಿತೆ || 2 ||
ಅಂತರ್ಯಾತ್ರೆಯ ಆನಂದದ ಕ್ಷಣ
ಹರಿಯಿತು ಅರಿವಿನಪೂರ
ತನು ಮನ ಧನ ಸಮರ್ಪಿತ ಜೀವನ
ಮಾತೆಗೆ ಮಂಗಲಹಾರ || 3 ||