ಸಂಘದ ಸಸಿಯಿದು ಹೆಮ್ಮರವಾಗಿದೆ

ಸಂಘದ ಸಸಿಯಿದು ಹೆಮ್ಮರವಾಗಿದೆ
ಕೇಶವ ನೀನೇ ನೋಡಲು ಬಾ
ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ
ಅಮೃತ ಫಲಗಳ ನೀಡಲು ಬಾ                               || ಪ ||

ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು
ಬೆಳೆಯಿತು ಭರದಲಿ ಬೆಳೆಯತಲಿಹುದು ಅಗಣಿತ ಶಾಖೆಗಳೈತಂದು
ಬೆಂಗಾಡನು ರಂಗೇರಿಸಿ ಬೀಸಿತು ನವಚೈತನ್ಯದ ತಂಗಾಳಿ
ದೈನ್ಯ ನಿರಾಶೆಯ ಕಾಲವು ಕಳೆಯಿತು, ಮೈಮರೆವಿನ ಪೊರೆಯನು ಸೀಳಿ || 1 ||

ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ
ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ
ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು
ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು        || 2 ||

ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ
ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ
ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ
ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ    || 3 ||

2 thoughts on “ಸಂಘದ ಸಸಿಯಿದು ಹೆಮ್ಮರವಾಗಿದೆ

    1. ಸಂಘದ ಸಸಿಯಿದು… ಹಾಡಿನ ರಾಗವನ್ನು ಸೇರಿಸಲಾಗಿದೆ.

Leave a Reply

Your email address will not be published. Required fields are marked *