ಸಮಾಜಪುರುಷನ ಅಭಂಗ ಪೂಜೆಗೆ ಅಸಂಖ್ಯ ಕಮಲಗಳರಳುತಿವೆ
ಅಸೀಮ ಸ್ಫೂರ್ತಿಯ ಸಶಕ್ತ ಯುವಕರ ಪ್ರಬುದ್ಧ ಹೃದಯಗಳರಳುತಿವೆ || ಪ ||
ಪ್ರಭಾತ ಭಾಸ್ಕರ ಮುದದಿಂದುದಿಸುತ ಪೂರ್ಣಾಕಾರದಿ ಬರುತಿಹನು
ನವರಾಗದ ನವಗಾನದ ನವೀನ ಸಂದೇಶವನದೊ ತರುತಿಹನು
ಅನಂತ ಪ್ರೇರಣೆ ದಿಗಂತ ತುಂಬುತ ಸಜೀವ ತಳೆಯುತಲಿದೆ ನಾಡು
ಸನ್ಮಂಗಳ ಜಯಗಾನವ ಪಾಡುವ ರಣಕಹಳೆಗಳೆದ್ದಿವೆ ನೋಡು || 1 ||
ರಾಷ್ಟ್ರದ ದೈವಾರಾಧನೆ ಬಂದಿದೆ ಬೆಂಕಿಯ ಕೊಡು ನಿಜ ಜೀವನಕೆ
ಪ್ರಜ್ವಲಿಸಲಿ ಯಜ್ಞದ ಜ್ವಾಲಾಪ್ರಭೆ ಧುಮುಕೊಮ್ಮೆಗೆ ಸಮರಾಂಗಣಕೆ
ಈ ಜೀವನವಾಗಲಿ ಆಜ್ಯಾಹುತಿ ಭೂರಜಕಾಗಲಿ ಸಂತೃಪ್ತಿ
ಅದರಿಂದಾಗಲಿ ಚಿರ ರಾಷ್ಟ್ರೋನ್ನತಿ ಅದುವರೆಗೆಲ್ಲಿದೆ ವಿಶ್ರಾಂತಿ? || 2 ||
Great work