ಸಾಧನೆಯ ವರ ಮಾರ್ಗದಲ್ಲಿ
ಬಂಧನಗಳ ಪ್ರೀತಿ ಎಲ್ಲಿ ? || ಪ ||
ಶಲಭದಂತೆ ದೀಪದಲ್ಲಿ
ಅಸ್ತಿತ್ವವನ್ನು ಕಳೆವ ನಮಗೆ
ಜ್ಯೋತಿಯಂತೆ ಜ್ವಲಿಪ ನಮಗೆ
ದಹಿಪ ಜ್ವಾಲೆಯ ಭೀತಿ ಎಲ್ಲಿ ? || 1 ||
ಸಿಂಧುವೊಡನೆ ಮಿಲನಕಾಗಿ
ಸರ್ವಸ್ವವನ್ನು ಹೋಮ ಗೈವ
ಅತಲ ಮಿಲನದ ಗುರಿಯ ನಮಗೆ
ಶೂನ್ಯತಟದಾ ದೃಷ್ಟಿ ಎಲ್ಲಿ ? || 2 ||
ದೀಪದಂತೆ ಸತತ ಬೆಳಗಿ
ಕತ್ತಲನ್ನು ದೂರ ಸರಿವ
ಜೀವನದ ಕಣಕಣವ ಸುರಿವ
ನಮಗೆ ನಿಶೆಯ ಭೀತಿ ಎಲ್ಲಿ ? || 3 ||
ಬೀಜದಂತೆ ಭುವಿಯ ಸೇರಿ
ವೃಕ್ಷದಂತೆ ತಲೆಯನೆತ್ತಿ
ಧರ್ಮಧ್ವಜಕೆ ಸ್ತಂಭವಾಗುವ
ನಮಗೆ ದೇಹದ ಮೋಹವೆಲ್ಲಿ ? || 4 ||
ಆಧಾರವಾಗಿ ಭವ್ಯ ಗುಡಿಯ
ಅಡಿಯ ಶಿಲೆಯೊಳ್ ನಿಲುವ ನಮಗೆ
ಇದುವೆ ನಮ್ಮಯ ಧ್ಯೇಯ ಜೀವನ
ಕೀರ್ತಿಯ ಆಸಕ್ತಿ ಎಲ್ಲಿ ? || 5 ||