ಸದಾ ಮೊಳಗುತಿರಲಿ ದುಂದುಭಿಯ ಘೋಷ
ಪ್ರತಿನಿಧಿಸಿ ಪ್ರತಿಧ್ವನಿಸಿ ದಿಗ್ವಿಜಯದಾಶಾ || ಪ ||
ಪಾಂಡುರಂಗನಖಂಡ ಪಾಂಚಜನ್ಯದ ಧ್ವನಿಗೆ
ಪಾಂಡವರ ಗುಂಡಿಗೆಯು ಗರಿಗೆದರಿದಂತೆ
ಚಂಡಿ ಚಾಮುಂಡಿಯರ ಅಟ್ಟಹಾಸವ ಕಂಡು
ಭಂಡ ರುಂಡಗಳಂದು ಧರೆಗುರುಳಿದಂತೆ || 1 ||
ಪ್ರಳಯರುದ್ರನ ಡಮರು ವಾದನದ ಸ್ಪಂದನದಿ
ತಾಂಡವದ ತಾಳಲಯ ರೂಪುಗೊಂಡಂತೆ
ಸ್ವರ್ಗದಿಂ ಧುಮ್ಮಿಕ್ಕಿ ಭೋರ್ಗರೆವ ಜಲಧಾರೆ
ಜಗದಗಲ ಸಂಭ್ರಮದಿ ಹರಿದಾಡಿದಂತೆ || 2 ||
ಭರತಖಂಡ ಪ್ರಚಂಡ ಗಂಡುಗಲಿಗಳ ತಂಡ
ಚಂಡಮಾರುತದಂತೆ ಅಪ್ಪಳಿಸಿದಾಗ
ಅಖಿಲ ಭೂಮಂಡಲವೆ ಥರಥರನೆ ಕಂಪಿಸುತ
ವೈರಿಕುಲ ಉದ್ದಂಡ ಶರಣು ಬಂದಾಗ || 3 ||
ರಿಪುಧಮನಿಗಳ ದಮನ ಖಳ ಶಕುನಿಗಳ ಶಮನ
ಗಮನವೆಮ್ಮದು ಗಹನ ಗಗನದೆಡೆಗೆ
ನಿಲ್ಲದಿದು ರಣಘೋಷ ವಾದನದ ಅನುರಣನ
ಗೆಲ್ಲುವುದೆ ಗುರಿಯೆಮದು ಕಟ್ಟಕಡೆಗೆ || 4 ||