ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ
ಸ್ವದೇಶ ಸ್ವಧರ್ಮಗಳನುರಾಗಿ || ಪ ||
ಸೀತಾಬರ್ಡಿಯ ಕಿಲ್ಲೆಯ ಮೇಲೆ
ದಾಸ್ಯದ ಧ್ವಜ ಹಾರಾಡುತಲಿರಲು
ಕೊಠಡಿಯ ನೆಲದಿಂ ಕೋಟೆಯ ಒಳಕೆ
ಅಗೆದು ಸುರಂಗವ ಅದ ಕಿತ್ತೆಸೆಯುವ
ಸಾಹಸ ಸ್ಪುರಿಸಿತು ಹಸುಳೆಯ ಮನದಿ || 1 ||
ಆಂಗ್ಲ ಗುಲಾಮಿಯ ವೀಕ್ಷಕನೋರ್ವ
ಶಾಲೆಯ ದ್ವಾರದಿ ಕಾಲನ್ನಿಡಲು
ಸಿಡಿಯಿತದೋs ‘ವಂದೇ ಮಾತರಂ’
ಸಾವಿರ ಕಂಠದ ಸಿಡಿಲಿನ ಘೋಷ
ಧೀರ ಕಿಶೋರನ ಮುಂದಾಳ್ತನದಿ || 2 ||
ಮೊದಲಿಗೆ ಶಿಕ್ಷಣ ಪೂರೈಸೆಂದು
ದೇಶದ ಸೇವೆಯು ನಂತರವೆಂದು
ಹಿರಿಯರದೋರ್ವರು ಉಪದೇಶಿಸಲು
ಮರುಕ್ಷಣ ಹೇಳಿದ – ಒಪ್ಪಿದೆ ಮಾತನು
ತಾವೇತಕೆ ಬರಬಾರದು ಎಂದು || 3 ||
ಎದೆಯೊಳು ತಳಮಳ ತೀವ್ರತೆ ಮನದಿ
ತಾನಾಗಿಯೆ ಶ್ರಮಿಸುವ ಹಂಬಲದಿ
ಮೈ ಸುಡುಸುಡುತಿದ್ರು ಮೇಲೆದ್ದು
ನಡುನಿಶೆಯಲಿ ನಿಶ್ಶಬ್ದದಿ ಹೊರಟರು
ವಾಹನ ಹುಡುಕಲು ನಗರದೊಳಂದು || 4 ||
ದರ್ಪದ ಮೂರ್ತಿಯ ತೆರದೊಳಗಿದ್ದ
ಅಭ್ಯಂಕರರಂತಹರನು ಗೆದ್ದ
ಗುಣವಂತಿಕೆ ಸಚ್ಚರಿತೆಯ ಮೂರ್ತಿ
ಕಠಿಣತೆ ತೀವ್ರ ವಿರೋಧವ ಎದುರಿಸಿ
ಹೃದಯವ ಆಳಿದ ಅಳಿಯದ ಕೀರ್ತಿ || 5 ||
ಸಾಧನೆ ಶಾಶ್ವತವಾಗುಳಿವಂತೆ
ನಿಶಿದಿನ ಸಂಘಟನೆಯದೇ ಚಿಂತೆ
ಮುಂದಿನ ದಿಗ್ದರ್ಶಕ ಯಾರಂತೆ
ಎನ್ನುವ ಪ್ರಶ್ನೆಯೆ ಏಳದ ತೆರದೊಳು
ನೇಮಿಸಿ ನಡೆದರು ದೃಢನಾಯಕನ || 6 ||