ಪುಣ್ಯಪಾವನ ಧ್ಯೇಯ ಸಾಧಿಸಿ
ಧನ್ಯವಾಗಲಿ ನಮ್ಮ ಜೀವನ || ಪ ||
ಮಾತೆ ಸೀತೆಯ, ರಾಮಚಂದ್ರನ
ಪಾವನಾಂಘ್ರಿಯ ಸ್ಪರ್ಶ ಹೊಂದಿದ
ತಾಯೆ ನಿನ್ನಯ ಧೂಳಿನಿಂದಲಿ
ಸ್ವಚ್ಛಗೊಳ್ಳಲಿ ಮಲಿನ ತನುಮನ || 1 ||
ರಜಪುತಾನದ ಚಿತೆಗಳಿಂದಲಿ
ಧಗಧಗಿಸಿ ಉರಿದಗ್ನಿಜ್ವಾಲೆಯ
ಕಿಡಿಯು ಬೆಳಗಲು ಅಂತರಂಗವ
ಅಳಿದು ಕಳೆವುದು ದೌಷ್ಟ್ಯಭೀಷಣ || 2 ||
ತುಚ್ಛ ಆಸೆಯು ಮನದೊಳಿಲ್ಲವು
ತೃಣಸಮಾನವು ಒಡವೆ ವಸ್ತ್ರವು
ಶುಭದ ವಸನವೆ ನಮ್ಮ ವೇಷವು
ಶೀಲ ನಮ್ಮಯ ದಿವ್ಯ ಭೂಷಣ || 3 ||
ಮಾತೃಭೂಮಿಯ ದಿವ್ಯಭಾವದ
ಸತ್ಯತೆಯ ಸಂದೇಶ ಸಾರುತ
ತಾಯಿ ಧೀರೆ ಸುಶೀಲೆ ಎಂಬುದ
ಲೋಕಕೆಲ್ಲಕು ಘೋಷಿಸೋಣ || 4 ||
ಜನ್ಮ ದುರ್ಲಭ ಭರತದೇಶದಿ
ಎಂದು ಮೊಳಗಿದೆ ಸಂತವಾಣಿಯು
ಮಕ್ಕಳೆಲ್ಲರು ಪೂರ್ಣಗೊಳಿಸುವ
ಪ್ರಾಣಪುಷ್ಪದಿ ಮಾತೃಪೂಜನ || 5 ||