ಪಾವನೆ ವೀರ ಶಿವಾಜಿಯ ಮಹತಾಯಿ
ವಂದನೆ ಸಲಿಪೆವು ಓ ಜೀಜಾಬಾಯಿ || ಪ ||
ತಾಯ್ನೆಲ ಮ್ಲೇಚ್ಛರ ಹಾವಳಿಗೀಡಾಗಿ
ದಾಸ್ಯದ ಕತ್ತಲೆ ಹಬ್ಬಿರೆ ನೀ ಮರುಗಿ
ಸ್ವಾರ್ಥವ ಬಯಸದೆ ಜನಹಿತ ಚಿಂತಿಸಿದೆ
ಕಡುಗಲಿ ಪುತ್ರನ ಜನ್ಮಕೆ ಪ್ರಾರ್ಥಿಸಿದೆ || 1 ||
ಮಿಡಿಯಿತು ಸ್ವದೇಶಪ್ರೇಮವು ಎದೆಯೊಳಗೆ
ಕರುಳಿನ ಕುಡಿ ಚಿಗುರೊಡೆಯಿತು ನಿನ್ನೊಳಗೆ
ನವರವಿ ಉದಿಸಿದ ಕಾರ್ಗತ್ತಲ ಸೀಳಿ
ಧೈರ್ಯ ಪರಾಕ್ರಮ ಬಂದೊಲು ಮೈತಾಳಿ || 2 ||
ರಾಮನ ಶ್ಯಾಮನ ಕಥೆಗಳ ವರ್ಣಿಸಿದೆ
ಸುತನಿಗೆ ಭೀಮಾರ್ಜುನರನು ನೆನಪಿಸಿದೆ
ಸ್ವದೇಶ ಸ್ವಧರ್ಮದ ಭಕ್ತಿಯ ಅರಳಿಸಿದೆ
ಸ್ವಾತಂತ್ರ್ಯಕೆ ಹೋರಾಡಲು ಪ್ರೇರಿಸಿದೆ || 3 ||
ನೀತಿ ಸ್ವಸಂಸ್ಕೃತಿ ಶೀಲವ ಉಳಿಸೆಂದು
ಕರೆ ನೀಡಿದೆ ಗೋಹತ್ಯೆಯ ನಿಲಿಸೆಂದು
ನಿನ್ನಾಶೀರ್ವಾದವ ಪಡೆದ ಶಿವಾಜಿ
ಸಮರವ ಸಾರಿದ ಏರಿದ ರಣವಾಜಿ || 4 ||
ಶಾಶ್ವತವಾಯಿತು ನಿನ್ನಯ ಕಥೆಯು
ಸಾರ್ಥಕವಾಯಿತು ಜೀವನಲತೆಯು
ನಮಗಾದರ್ಶವು ನಿನ್ನಯ ವೀರವ್ರತ
ನಾಡಿನ ಏಳಿಗೆಗಾಗಿಯೆ ದುಡಿವ ಪಥ || 5 ||