ಒಂದುಗೂಡಿ ಬೆರೆತುಕೊಂಡು
ಬಂಧು ಭಾವ ಬೆಳೆಸಿಕೊಂಡು
ಒಕ್ಕೊರಳಲಿ ಕೂಗುವಾ ತಾಯಿಗೆ ಜಯಘೋಷವ
ತಾಯಿ ಭಾರತಿ ನಿನಗೆ ಆರತಿ || ಪ ||
ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು
ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು
ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾ ಸಲಿಲವು
ವಿಶ್ವಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 ||
ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು
ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು
ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು
ಮನದಲಿ ಮನೆಮಾಡಲು ಸ್ವಾಭಿಮಾನ ಮಂತ್ರವು || 2 ||
ತರುಣಶಕ್ತಿಯೇಳಲಿ ತಾಯ್ನಾಡಿನ ರಕ್ಷೆಗೆ
ಸಾಮರಸ್ಯ ಮೂಡಲಿ ವ್ಯಕ್ತಿ ವ್ಯಕ್ತಿ ಬೆಸುಗೆಗೆ
ಸದ್ವಿಚಾರ ಸ್ಪುರಿಸಲಿ ಜನಮನ ಸಂರಕ್ಷಣೆಗೆ
ನಾಡಿನೇಳ್ಗೆಗಾಗಿಯೇ ಉರಿಸಿ ಕಾಯದೀವಿಗೆ || 3 ||