ನೋಡುವ ಬನ್ನಿರಿ ಬಂಧುಗಳೆಲ್ಲ, ಹಿಂದುಸ್ಥಾನದ ಸಾಹಸವ
ಬಲಿದಾನದ ಈ ಭೂಮಿಯ ಕಣದಿ, ಧರಿಸುವ ನೊಸಲಿಗೆ ತಿಲಕವನು
ವಂದೇ ಮಾತರಂ – ವಂದೇ ಮಾತರಂ
ವಂದೇ ಮಾತರಂ – ವಂದೇ ಮಾತರಂ || ಪ ||
ಉತ್ತರ ದಿಸೆಯೊಳು ರಕ್ಷಣೆ ಗೈಯುವ, ಪರ್ವತ ರಾಜ ಹಿಮಾಲಯ
ಭಾರತ ಮಾತೆಯ ಪಾದವ ತೊಳೆಯುತ, ಇಹುದದು ಸಾಗರ ಸಾಮ್ರಾಜ್ಯ
ಗಂಗಾ ಯಮುನೆಯ ಸುಂದರ ತಟವು, ಪವಿತ್ರವೆನಿಸಿಹ ಸಂಗಮವು
ಗ್ರಾಮ ಗ್ರಾಮದಿ ಪ್ರಾಂತ್ಯ ಪ್ರಾಂತ್ಯದಿ, ಹರಡಿಹ ಅಸಂಖ್ಯ ದೇಗುಲವು
ನೋಡಿರಿ ನಮ್ಮಿ ‘ಅಖಂಡಭಾರತ’, ಗೌರವದೀ ಅಭಿಮಾನದೀ
ಬಲಿದಾನದ…….. || 1 ||
ಖಡ್ಗವ ಹಿಡಿದು ಕುಣಿಯುತ ಮಡಿದಿಹ, ಇದುವೇ ಧೀರರ ರಾಜಸ್ಥಾನ್
ದಾಸ್ಯವನೊಪ್ಪದೆ ಕಾದಿದ ಕಲಿಗಳ ‘ಜೋಹರ’ ವೀರರ ಜನ್ಮಸ್ಥಾನ್
ವೀರ ಪ್ರತಾಪನ ‘ಸ್ವತಂತ್ರ’ ಕಹಳೆಯು ಮೊಳಗಿದುದಿಲ್ಲಿಯೆ ರಾಜಪುತಾನ್
ಹರ್ಷದಿ ಚಿತೆಯನು ಏರಿಹರಂದು, ಪದ್ಮಿನಿಯಂತಹ ಮಾನಿನಿಯರ್
ಕಣಕಣ ನೆಲವು ಪೇಳುತಲಿಹುದು, ರಾಜಸ್ಥಾನದ ಸ್ಫೂರ್ತಿಯ ಗಾನ್
ಬಲಿದಾನದ… || 2 ||
ನೋಡಿರಿ ‘ಹಿಂದವಿ ರಾಜ್ಯವ’ ನಿಲಿಸಿದ, ವೀರ ಶಿವಾಜಿಯ ಜನ್ಮಸ್ಥಾನ್
ತಾನಾಶಾಹೀ ಮೊಗಲರ ಪೀಠವ, ಸ್ಪಂದನಗೊಳಿಸಿದ ರಾಜ್ಯಮಹಾನ್
ಗಿರಿದುರ್ಗದಲಿ ಜ್ವಲಂತಗೊಳಿಸಿದ, ರಾಷ್ಟ್ರಪ್ರೇಮದ ಕ್ಷಾತ್ರವನು
‘ಹರ ಹರ ಮಹದೇವ’ ಮಾರ್ದನಿಗೊಂಡಿತು, ಗಿರಿಕಂದರಗಳ ನಾಡಿನೊಳು
ಇಲ್ಲಿಯೇ ನಮ್ಮೀ ರಾಷ್ಟ್ರದ ಕೀರ್ತಿಯ, ಬಾವುಟ ಶಿವಾಜಿ ಹಾರಿಸಿದ
ಬಲಿದಾನದ….. || 3 ||
‘ಜಲಿಯನ್ವಾಲಾಬಾಗ್’ನು ನೋಡಿ, ನಡೆದುದು ಇಲ್ಲಿಯೆ ಕಗ್ಗೊಲೆಯು
ಕೇಳಿರಿ ಆಂಗ್ಲರು ಆಡಿದರಂದು, ರಕ್ತದಿ ಹೋಳಿಯ ಆಟವನು
ಮೊಳಗುವ ಗುಂಡಿನ ಢಂಢಂ ಶಬ್ದದಿ, ಕೇಳದು ಮಡಿವರ ಹಾಹಾಕಾರ್
ಕ್ರಾಂತಿಕಾರಿಗಳ ಮುಖದಿಂ ಹೊರಟಿತು, ಭಾರತಮಾತೆಯ ಜಯಜಯಕಾರ್
ಅಸಂಖ್ಯ ಭಗಿನಿಯರಿತ್ತರು ಪ್ರಾಣವ, ಮಾತೆಯ ಬಂಧವಿಮೋಚನೆಗೆ
ಬಲಿದಾನದ………… || 4 ||
ಕೂಡಿಹ ಸುಂದರ ವನ ಉಪವನದಿ, ಸಸ್ಯಶ್ಯಾಮಲೆಯು ಬಂಗಾಳ
ಬಾಲರು ಹರ್ಷದಿ ನೀಗಿಹರಿಲ್ಲಿ, ಅಸುವನು ಮಾತೆಯ ಮಡಿಲಲ್ಲಿ
ವೀರ ಸುಭಾಷರು ಜನ್ಮವನೆತ್ತಿದ ಉಜ್ವಲತೇಜದ ಭೂಮಿಯಿದು
ಭಾರತ ಕೇಸರಿ ಶಾಮಪ್ರಸಾದರು, ‘ಜ್ಯೋತಿಯ’ ಬೆಳಗಿದ ಪ್ರಾಂತವಿದು
ಮಾತೆಯ ಖಂಡನೆ ತೊಲಗಿಸಲೆಂದು, ಬಲಿವೇದಿಯನು ಏರಿದರು
ಬಲಿದಾನದ……. || 5 ||
ಭಾರತ ಮಾತೆಯ ಹೃದಯದೊಲಿಹುದು, ಮಧ್ಯಪ್ರದೇಶದಿ ನಾಗಪುರ
ಉದಿಸಿದರಿಲ್ಲಿಯೆ ‘ಹಿಂದೂಭಾಸ್ಕರ’ ಕೇಶವ ಬಲಿರಾಮ ಹೆಡ್ಗೇವಾರ್
‘ಹಿಂದೂಸ್ಥಾನವು ಹಿಂದುವುದೆಂಬ’ ಘೋಷವ ಗೈಯ್ದರು ನಿರಂತರ
ಗ್ರಾಮ ಗ್ರಾಮದಿ ಪ್ರಾಂತ್ಯ ಪ್ರಾಂತ್ಯದಿ ಬೆಳೆದುದು ಸಂಘವು ಮಹತ್ತರ
ದಧೀಚಿಯಂದದಿ ತನುವನು ಜ್ವಲಿಸಿ, ‘ಸಂಘ-ಜ್ಯೋತಿ’ಯ ಬೆಳಗಿದರು
ಬಲಿದಾನದ… || 6 ||