ನಿಂತೆ ನಿಂತಿರುವಳಾ ಉದ್ದಕುದ್ದಂಡ
ಸಂತಾನ ಕೂಡಿ ನವ ಜೀವನವ ಕಂಡ || || ಪ ||
ಕಾಶ್ಮೀರ ಕನ್ಯಾಕುಮಾರಿ ಪರ್ಯಂತ
ಭಾರತಿಯ ಶುಭಕಾಯ ಸುಭಗ ಶ್ರೀಮಂತ |
ಸಾರಯುತ ಸಮ್ಮಿಲಿತ ಫಲಭರಿತ ಆದ್ಯಂತ
ಆಶ್ವೇತ ಗಿರಿಕಾಯ ಶಿರಮುಕುಟ ಪ್ರಾಂತ || || 1 ||
ಯುಗ ಯುಗಾಂತರ ಗಂಗೆ ಹಿಮದುದರದಿಂದ
ಹೊಮ್ಮಿ ಹರಿದಿಹಳೆಮ್ಮ ಪೊರೆದು ಕೋದಂಡ |
ದಕ್ಷ ದರ್ಪವ ಅಳಿಸಿ ತಾರಕನ ವಧಿಸಿ
ಶಿಕ್ಷೆ ನಡಿಗಡಿಯ ಮೀರಿದರೆಂದು ವಿಧಿಸಿ || || 2 ||
ಧವಲಗಿರಿ ಧರಿಸಿಹುದು ಕಾಲಕಾಲಕ್ಕೆ
ರಕ್ತ ತಿಲಕವ ಲೋಕ ಕಾಪಾಡಲಿಕ್ಕೆ |
ನಮಗೆಲ್ಲ ಹೆಮ್ಮೆಯಾಗರ ತಪದ ಭೂಮಿ
ಸೋಮಶೇಖರ ಪಾರ್ವತಿಯರ ನೆಲೆಭೂಮಿ || || 3 ||
ಪುಣ್ಯ ಮಾನಸ ತೀರ್ಥ ಬದರಿ ಕೇದಾರ
ಧನ್ಯತೆಯ ಒದಗಿಸುವ ಬದುಕಿನಾಧಾರ |
ಅಶ್ಮತೃಣ ಕಾಷ್ಠಗಳು ತಪಗೈದು ಸತತ
ಕಶ್ಮಲವ ಕಳೆದಿಲ್ಲಿ ಇರ್ಪವು ಪುನೀತ || || 4 ||
ಸಾಷ್ಟಾಂಗ ನಮನ ನಮ್ಮಯ ಹಿಮಾಲಯಕೆ
ಅಲ್ಲಿರುವಮೋಘ ಮುನಿ ತಾಪಸ ವಿಜಯಕೆ |
ಭಾರತಿಯ ಶುಭಕಾಯ ಸುಭಗ ಶ್ರೀಮಂತ
ಆಶ್ವೇತ ಗಿರಿಕಾಯ ಶಿರಮುಕುಟ ಪ್ರಾಂತ || || 5 ||