ನಿನ್ನೊಲವಿನಲಿ ನಲಿವ ಭಾಗ್ಯವೆಮ್ಮದು ತಾಯೆ
ಬಣ್ಣನೆಗೆ ನಿಲುಕದಿಹ ಭವ್ಯ ಸಂಸ್ಕೃತಿ ಪ್ರಭೆಯೆ || ಪ ||
ಸರ್ವರಲು ಸಮಭಾವ ಹಿಂದುತ್ವದೌನ್ನತ್ಯ
ಅಸ್ಮಿತೆಗೆ ಕುಂದಿರದ ಸ್ವಂತಿಕೆಯ ಸಾಂಗತ್ಯ
ವಿಧವಿಧದ ಭಾಷೆಮತ ಒಮ್ಮತದ ವೈವಿಧ್ಯ
ತ್ಯಾಗದೆಲೆ ಅತಿಹಿತವು ಜಗದಗಲ ಬಾಂಧವ್ಯ || 1 ||
ಅತಿಸಹನೆ ಒಳಿತಲ್ಲ ಸ್ವಾಭಿಮಾನಕೆ ಧಕ್ಕೆ
ಜನನಿಯಾದೆಯೆ ದುರ್ಗೆ ದುಷ್ಟ ಸಂಹಾರಿಣಿಯೆ
ಮರೆತುಬಿಟ್ಟೆವು ಚರಿತೆ ಮನ್ನಿಸೆಮ್ಮನು ತಾಯೆ
ಪಾಪಿಗಳ ದುಷ್ಕೃತಿಯು ಸುತರಿಗಿಲ್ಲವೆ ನೆಲೆಯೆ || 2 ||
ದೋಷಗಳನರಿತಿಹೆವು ಎಚ್ಚರಾಗಿಹೆವಿಂದು
ಹಿಂದುಪಡೆ ಭೊರ್ಗೆರೆವ ಶರಧಿಯಾಗಿಹುದಿಂದು
ಸ್ವಾರ್ಥ ತರತಮವಿರದ ಸಂಘಶಕ್ತಿಗೆ ಗೆಲುವು
ಕೇಳಲಿದೆ ಶೀಘ್ರದಲೆ ಧರ್ಮವಿಜಯದ ಮೊಳಗು || 3 ||