ನಿನ್ನನು ಪೂಜಿಸಲೆಂದೆ ದೂರದಿಂದ ಬಂದೆ
ಸಲಕರಣೆಯ ಬೇಕಾದುದು ಎಲ್ಲವ ತಂದೆ || ಪ ||
ಶಿರವಿದ ತಂದಿರುವೆ ನಮಿಸಲು ನಿನ್ನಡಿಗೆ
ಕಣ್ಗಳ ನಿನ್ನಯ ಶುಭದರ್ಶನಕೆ
ಕಿವಿಗಳು ಎರಡನು ಹದಗೊಳಿಸಿಟ್ಟಿರುವೆ
ಗುಣಸಂಕೀರ್ತನೆಯನು ಕೇಳಲಿಕೆ
ನಾಲಗೆಯನು ನಾ ಮೀಸಲು ಮಾಡಿರುವೆ
ನಾಮಾಮೃತಸ್ರೋತವ ಸವಿಯಲಿಕೆ
ಹೃದಯದ ಸಿಂಹಾಸನವನು ಅಣಿಗೊಳಿಸಿ
ಮನವನೆ ಹಾಸಿಗೆಯೊಲು ಬಿಡಿಬಿಡಿಸಿ
ಕಟ್ಟಿರುವೆನು ಭಾವನೆಗಳ ಉಯ್ಯಾಲೆ
ತೂಗಲಿದೋ ಕಲ್ಪನೆಗಳ ಮಾಲೆ || 1 ||
ಅಭಿಷೇಕಕೆ ಬಾಷ್ಪಾಂಜಲಿ ತಂದಿರುವೆ
ಶ್ವಾಸೋಚ್ಛ್ವಾಸವೆ ಮೃದುಚಾಮರವು
ನಿನ್ನಯ ಪಾದವನೊತ್ತಲು ಹೇ ದೇವ
ಎರಡೂ ಕೈಗಳನಿದೊ ನೀಡಿರುವೆ
ಬಂದೊದಗಿರೆ ಉಪಕರಣಗಳಿನಿತೊಂದು
ಆರಾಧನೆಗಿನ್ನಾವುದು ಕೊರತೆ ?
ಆತ್ಮಸಮರ್ಪಣೆಯಿದ ಅನುಗ್ರಹಿಸು
ನೈವೇದ್ಯವನಿದೊ ಕೊಳ್ ಸ್ವೀಕರಿಸು || 2 ||