ನಿನ್ನ ನೆನಪು ತರಲಿ ನಮಗೆ

ನಿನ್ನ ನೆನಪು ತರಲಿ ನಮಗೆ ಹೃದಯದಾ ವಿಕಾಸ
ಅದರ ಅರಿವಿನಲ್ಲಿ ದೂರವಾಗಲೆಲ್ಲ ಪಾಶ
ಮಾಯವಾಗಿ ಸ್ವಾರ್ಥವೆಲ್ಲ ಮೂಡಲೊಂದು ಆಶಾ
ನಿನ್ನ ಕಣದ ಅಣುವು ನಾವು ಆಗಲೆಂಬ ಆಶಾ || ಪ ||

ಚಂಡಮಾರುತದ ನಡುವೆ ಒಂದೆ ದೀಪ ಜ್ವಾಲೆ
ಉರಿಯುತಿತ್ತು ದಿಟ್ಟತನದಿ ಸೊರಗಿಹೋಯ್ತು ಗಾಳಿ
ಕತ್ತಲನ್ನು ದೂರ ಸರಿಸಿ ಬೆಳಗಿ ಅದರ ಜ್ವಾಲೆ
ಹೊತ್ತಿಸಿತು ದೀಪಗಳನು ಆಯ್ತು ದೀಪ ಮಾಲೆ || 1 ||

ಹಿಂದು ನಾವೆ ಮುಳುಗಿಸಲು ಏಳುತಿದ್ದ ಅಲೆಗಳು
ನಾವಿಕನೆ ನಿನ್ನ ಮುಂದೆ ಉಡುಗಿ ಹೋಯ್ತು ತಳದಲಿ
ಸಾಗು ಸಾಗುತಲಿ ತಟವ ಸೇರಲಿದೆ ಕೊನೆಯಲಿ
ಕೋಟಿ ಕೋಟಿ ಪಯಣಿಗರ ಸಂತಸದ ಮಧ್ಯದಲಿ || 2 ||

ತಂಪು ತರುತಲಿತ್ತು ಬೆಂದ ಜೀವಿಗಳಿಗೆ ನಿನ್ನ ನುಡಿ
ಅನಂತ ಗೆಲುವು ನಲಿವು ನಿನ್ನ ಹಸನ್ಮುಖವ ನೋಡಿ
ನಿನ್ನಲಿದ್ದ ಅಗ್ನಿಯೆಲ್ಲ ಹೃದಯಗಳಲಿ ತಾವ ಮಾಡಿ
ನಗುತ ಬಲಿಯನೀವ ಭಾವ ಬಂದಿತರಿವು ಮೂಡಿ || 3 ||

ಜ್ವಾಲಾಮುಖಿಯ ತೆರದಿ ನಿನ್ನ ನಿಲುವು ಬಲು ಗಂಭೀರ
ನಾಡ ಬಂಧು ಬಾಂಧವರಲಿ ನಿನ್ನೊಲುಮೆಯಪಾರ
ಬೇಡುವೆವು ಕೇಶವಾ, ಸದಾ ಹರಕೆ ನೀಡು
ಈಶಕಾರ್ಯ ಮಾಡುತಲಿ ಸಾಗಲೆಮ್ಮ ಬಾಳು || 4 ||

Leave a Reply

Your email address will not be published. Required fields are marked *