ನೆನಪಿಹುದೆ ? ಅಂದೊಮ್ಮೆ –
ಪಶುಶಕ್ತಿಯಿಂದುಬ್ಬಿ, ಋಷಿರಕ್ತದಿಂ ಕೊಬ್ಬಿ
ಯಂತ್ರ ಪ್ರಗತಿಯ ಪ್ರತೀಕವಾ ಪುಷ್ಪಕವನೇರಿ
ದಕ್ಷಿಣದ ಲಂಕೆಯಿಂದುತ್ತರಕೆ ಹಾರಿ
ಕೈಲಾಸವನೆ ಕಿತ್ತು ಬಿಸುಡಲುದ್ಯಮಿಸಿ
ಕಲಿತ ಬುದ್ದಿಯನು ದೈತ್ಯ ದಶಶಿರನು ! || ಪ ||
ಮದಮತ್ತನಾ ರಕ್ಕಸನದೇ ರೂಪ
ಪಶುಬಲದ ಕ್ರೂರ ಚೀನಿಯರ ಘೋರತೆಯನಾಂತು
ಮಗದೊಮ್ಮೆ ಹೂಂಕರಿಸಿ ಬೊಬ್ಬಿರಿದು ಮೇಲೆದ್ದು
ಶಾಂತಿಯರಮನೆ ತ್ರಿವಿಷ್ಟಪದ ಸಾಧುಸಂತರನೊದ್ದು
ಹತ್ತಿ ಹಿಮಗಿರಿಯ ನೆತ್ತಿಯನು
ಮತ್ತೆ ಕೆಳಗಿಳಿದು ಸೆಳೆದಿಹುದು ಭಾರತಿಯ ಮುಡಿಯ;
ಕಾಲೆತ್ತಿ ತುಳಿದಿಹುದು ಸೀತಾಸತಿಯ ಧರೆಯ ! || 1 ||
ಕಣ್ಮುಚ್ಚಿ ಕುಳ್ಳಿರುವ ಕೈಲಾಸದಧಿಪತಿಯೆ
ಕಲಿಯುಗದ ಕಲುಷವಾವರಿಸಿತೇಂ ನಿನಗೆ ?
ಶರಧನುಗಳಿಲ್ಲದೆಯೆ ತಿರುಕನಂತಲೆವ ಗತಿ ಬಂತೆ –
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ”
– ಮಂತ್ರವಿದ ಘೋಷಿಸಿದ ರಘುಕುಲದ ತಿಲಕಂಗೆ ?
ಬೋಳಾಗಿ ಗೋಳಿಡುತಲಿಹುದದೋ ಹಿಮದಗಿರಿ ! || 2 ||
ಬಿಸಿರಕ್ತ ಸೇಚನದ ದಿವ್ಯಾರ್ಚನೆಯ ಗೈದು
ಫಾಲಾಕ್ಷನುರಿಗಣ್ಣ ತೆರೆಯಿಸಲು
ಭಾರತಿಯ ಭಕ್ತಕೋಟಿಯೆ ಬನ್ನಿರೈ ;
ಬರಿಗೈಯ ರಾಘವನ ಶರಧನುಗಳಂತೆಸೆಯೆ
ತನು ಮನಗಳಂ ಮಸೆಮಸೆದು ತನ್ನಿರೈ ! || 3 ||