ನರಕನೋವಲಿ ಜನನಿ ನರಳುವುದ ತಾ ಕಂಡು

ನರಕನೋವಲಿ ಜನನಿ ನರಳುವುದ ತಾ ಕಂಡು
ಸಮ್ಮಾನ ಸುಖಸುಧೆಯ ತ್ಯಜಿಸಿದವನಾರು ?
ಅಗ್ನಿಗಾಹುತಿ ಎನ್ನ ಸರ್ವಸುಖವೆಂದು
ಕಾಲಕೂಟದ ಕುಡಿದ ಕಲಿಪುರುಷನಾರು ? || ಪ ||

ಮಾತಿರದ ಕಂಠದೊಳು ಭಯಭೀತ ಭಾವದೊಳು
ಹಿಂದು ಬಂಧುಗಳೆಲ್ಲ ಹರಿದು ಹಂಚಿರಲು
ವರುಷ ಸಾಸಿರದಿಂದ ಪದಪ್ರಹಾರವ ಸಹಿಸಿ
ತನ್ನ ಅಸ್ತಿತ್ವವನೆ ತಾನು ಮರೆತಿರಲು
ಆತ್ಮವಿಸ್ಮೃತಿಯೆಂದು ಪತನ ನಿಶ್ಚಿತವೆಂದು
ಬಾಂಧವರನೆಚ್ಚರಿಪ ಕರೆ ಕೊಟ್ಟನಾರು ? || 1 ||

ಅಪಹಾಸ ಉಪಹಾಸ ಎಲ್ಲೆಡೆಯು ಧ್ವನಿಸುತಿರೆ
ದುಃಖ ದುಮ್ಮಾನದಲಿ ತಾಯೊಡಲು ಸೂಸುತಿರೆ
ಕುಪುತ್ರ ಕೋಟಿ ಇದೇಕೆ ಬಂಜೆತನ ಲೇಸೆಂದು
ತಾಯ್ದೇವಿ ಕಣ್ಣೀರ ಹರಿಸುತಿರಲು
ಕಷ್ಟ ಕಾರ್ಪಣ್ಯಗಳ ಕಡುಗಡಲ ದಾಟಿಸಲು
ಕೈಲಿ ಹುಟ್ಟನು ಹಿಡಿದ ನಾವಿಕನದಾರು ? || 2 ||

ಉರುಳು ಹಗ್ಗದ ಹಾರ ತಾಯ್‍ ಕೊರಳ ಬಿಗಿದಿಹುದು
ದಾಸ್ಯ ಮದಿರೆಯ ಕುಡಿದು ದೇಶ ಮಲಗಿಹುದು
ಹೀನ ದೀನರು ಇವರು ಹತಭಾಗ್ಯರೆಂದು
ಹಿಂದು ಸಂತಾನವನು ಜಗವು ಜರೆಯುತಿರೆ
ತ್ಯಕ್ತ ಪಾಷಾಣದಿಂ ತಳಪಾಯ ಶಿಲೆಗೊಳಿಸಿ
ಭವನವನು ನಿರ್ಮಿಸಿದ ಶಿಲ್ಪಿಯಿವನಾರು ? || 3 ||

ದೇಹ ನಶ್ವರವೆಂದು ದೇಶ ಶಾಶ್ವತವೆಂದು
ನಶ್ವರವು ಶಾಶ್ವತಕೆ ಮುಡಿಪಾಗಲೆಂದು
ತರುಣರಲಿ ಪ್ರೇರಣೆಯ ಹೊನಲ ಹರಿಸುವೆನೆಂದು
ದೇಹ ಕಣಕಣ ಬಸಿದು ಬರಿದಾದನಂದು
ಅಳಿದು ಉಳಿದವನಾರು ? ಅಮರನಾದವನಾರು ?
ಅವಿನಾಶಿ ನಾಡೆಂದು ಸಾರಿದವನಾರು ? || 4 ||

Leave a Reply

Your email address will not be published. Required fields are marked *