ನಾಗಪುರದ ಮಹಲಲಾಯಿತು

ನಾಗಪುರದ ಮಹಲಲಾಯಿತು ನಾರೀರತ್ನದ ಜನನವು
ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಕಿ ಈಕೆ ಸ್ತ್ರೀಯರ ಭಾಗ್ಯವು
ಕಮಲ ಕೋಮಲೆ ವಾತ್ಸಲ್ಯಮಯಿಗೆ ಶಾಂತ ಸ್ನೇಹದ ಭಾವವು
ರಾಷ್ಟ್ರ ಚಿಂತನೆ ಸ್ತ್ರೀಯ ರಕ್ಷಣೆಯಂಥ ಉನ್ನತ ಧ್ಯೇಯವು || ಪ ||

ಬಾಲ್ಯದಲ್ಲಿಯೆ ಯೋಗ್ಯ ಶಿಕ್ಷಣ ರಾಷ್ಟ್ರಭಕ್ತಿಯ ಸೇಚನ
ಕೇಳ್ಕರೊಡನೆ ವಿವಾಹ ಬಂಧನ ಲಕ್ಷ್ಮಿಯಾಗಿ ವಾರ್ಧಾ ಜೀವನ
ಗೃಹಿಣಿಯಾಗಿ ಗೃಹಬಂಧನ ಲಕ್ಷ್ಮೀ ಎದೆಯಲಿ ತಲ್ಲಣ
ಮುದ್ದು ಮಕ್ಕಳ ಮಾತೆಯಾ ಮನ ನಿರತ ವಿಚಾರ ಮಂಥನ || 1 ||

ಸಾರ್ವಜನಿಕ ಜೀವನಕೆ ಲಕ್ಷ್ಮೀಬಾಯಿಯ ಪಾದಾರ್ಪಣೆ
ಸೀತೆಯ ಆದರ್ಶ ಮಹಿಳೆಗೆ ಮಹಾತ್ಮಾಜಿಯ ಪ್ರೇರಣೆ
ಮನದಿ ಮಥಿಸಿ ಗಟ್ಟಿಯಾದ ತಿರುಳೇ ಸ್ತ್ರೀಯರ ಜೋಡಣೆ
ಆದರಾಗಲೇ ವೈಧವ್ಯದಂತಹ ವಿಧಿಯ ಕ್ರೂರ ವಂಚನೆ || 2 ||

ಗಟ್ಟಿಮನದಲಿ ಮೆಟ್ಟಿನಿಂತರು ಸ್ವಂತ ಬಾಳಿನ ಗೋಳನು
ಮನದ ಭಾವದ ಅರುಹಿ ಪಡೆದರು ಹೆಡೆಗೇವಾರರ ನೆರವನು
ವಿಜಯದಶಮಿಯ ಶುಭ ಮಹೂರ್ತದಿ ನೆಡಲು ಸಮಿತಿಯ ಸಸಿಯನು
ಧರ್ಮಸಂಸ್ಕೃತಿ ರಾಷ್ಟ್ರ ರಕ್ಷಣೆಗಾಗಿ ತೇದರು ತನುವನು || 3 ||

Leave a Reply

Your email address will not be published. Required fields are marked *