ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ || ಪ ||
ಬೆಚ್ಚಬಿಡು ನೆಚ್ಚನೆಡು ಕೆಚ್ಚಿದೆಯ ಗುಡಿಯಲ್ಲಿ
ಸೆರೆಯ ಹರಿ, ಅರಿಯನಿರಿ, ಹುಟ್ಟಳಿಸು ಹುಡಿಯಲ್ಲಿ
ನಾನಳಿವೆ ನೀನಳಿವೆ ನಮ್ಮೆಲುವುಗಳ ಮೇಲೆ
ಮೂಡುವುದು ಮೂಡುವುದು ನವಭಾರತದ ಲೀಲೆ || 1 ||
ನೊಂದ ದನಿ ಕಣ್ಣಪನಿ ಬರಿದೆಯೆಂದೊರೆಯದಿರು
ತೆತ್ತ ಹಣ ಸತ್ತ ಹೆಣ ಹೋಯ್ತೆಂದು ಮೊರೆಯದಿರು
ಪೊಡವಿಯೊಳಗಡಗಿರುವ ತಳಹದಿಯ ತೆಗಳುವರೆ ?
ಮೆರೆಯುತಿರುವರಮನೆಯ ಸಿರಿಯೊಂದ ಹೊಗಳುವರೆ ? || 2 ||
ಎಲ್ಲ ಇದೆ ಎಲ್ಲ ಇದೆ ನಿತ್ಯತೆಯ ಗಬ್ಬದಲಿ
ಮುಂದೆ ಅದು ತೋರುವುದು ಬಿಡುಗಡೆಯ ಹಬ್ಬದಲಿ
ನೆಚ್ಚುಗೆಡಬೇಡ ನಡೆ ಕೆಚ್ಚೆದೆಯ ಕಲಿಯೆ
ಬೆಚ್ಚಿದರೆ ಬೆದರಿದರೆ ಕಾಳಿಗದು ಬಲಿಯೆ ?
ಭರತಖಂಡದ ಹಿತವೆ ಎನ್ನ ಹಿತ ಎಂದು
ಭರತ ಮಾತೆಯ ಮತವೆ ಎನ್ನ ಮತವೆಂದು
ಭಾರತಾಂಬೆಯ ಸುತರೆ ಸೋದರರು ಎಂದು
ಭಾರತಾಂಬೆಯ ಮುಕ್ತಿ ಮುಕ್ತಿ ಎನಗೆಂದು
ನುಗ್ಗು ಮರಣಕೆ ವೀರ ಸಗ್ಗದಾ ನೆಲೆಗೆ || 3 ||
ನೋಡದೋ ನೋಡಲ್ಲಿ ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ ನೆತ್ತರಿನ ಹುಡಿಯಲ್ಲಿ
ಬಾಳನೊರೆಯಿಂದ ಹಿರಿ, ನುಗ್ಗು, ನಡೆ, ಕಟ್ಟ ಹರಿ
ತಡೆಯ ಬಂದವರ ಇರಿ ಒಲಿಯುವಳು ಜಯದ ಸಿರಿ
ಜನ್ಮವೊಂದಳಿದರೇಂ ? ನೂರಿಹವು ಬಲಿಗೆ
ಕಾಳಗದೊಳಳಿಯಲೇಂ ಸಾವೆ ಸಿರಿ ಕಲಿಗೆ ?
ನಿಂತೇನು ನೋಡುತಿಹೆ ಹುದುಗುವರೆ ಇಲ್ಲಿ ?
ಮಸಣವಾಗಲಿ ಎದೆಯು ರಣರಂಗದಲ್ಲಿ
ನೆತ್ತರನು ನೋಡುವೆಯ ? ಸತ್ತವರ ನೋಡುವೆಯ ?
ಕಂಕಾಲುಗಳ ಗೂಡೆ ? ಮರಳುಗಳ ನೆಲೆವೀಡೆ ?
ಕಾಳಿಯಳುಕುವಳೇನು ರಕ್ಕಸರ ಬಲಿಗೆ ?
ಸಮರ ರಂಗದ ನಡುವೆ ಬೆದರಿಕೆಯ ಕಲಿಗೆ ? || 4 ||
ಹಾ ! ನೋವು, ಹಾ ! ನೋವು ಎಂದೆಲ್ಲ ಕೂಗುವರೆ ?
ಹಾ | ನೀರು ಹಾ | ನೀರು ಎಂದಸುವ ನೀಗುವರೆ ?
ಕೂಗಿಗೆದೆಗರಗದಿರು, ಬೇನೆಯಿರೆ ಮರುಗದಿರು
ಕಂಬನಿಯ ಕರೆಯದಿರು, ಗುರಿಯ ಮರೆಯದಿರು
ಕಲಿಯೆ ಹಿಂಜರಿಯದಿರು, ತಾಯ ತೊರೆಯದಿರು
ಎಲುಬುಗಳ ತೊಲೆಗಳಲಿ ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ ಬೇನೆ ಬಿಸು ಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ ಮಸಣದಲಿ ಕಟ್ಟು
ಪಾವನದ ತಾಯಡಿಯ ಬಲ್ಮೆಯಲಿ ಮುಟ್ಟು
ಆತ್ಮವಚ್ಯುತವೆಂದು ಜನ್ಮಗಳು ಬಹವೆಂದು
ಮೃತ್ಯು ನಶ್ವರವೆಂದು ಭಾರತಿಗೆ ಜಯವೆಂದು
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ || 5 ||