ಮೈಕೊಡವಿ ಮೇಲೇಳು ಸಾಧನೆಯ ಕಲಿಪುರುಷ,
ಬಾ ಹಿಂದು ಸೋದರನೆ ರಾಷ್ಟ್ರಕಾಗಿ…
ಮೃತ್ಯುಭೃತ್ಯನು ನೀನು ನಿನಗೆಲ್ಲಿ ಅಂಜಿಕೆಯೊ,
ಕರೆದಿಹಳು ಭಾರತಿಯು ರಾಷ್ಟ್ರಕಾಗಿ… || ಪ ||
ಜಗದಗಲ ಹರಡಿಹುದು ಕತ್ತಲೆಯ ಕಾರ್ಮೋಡ,
ಬೆಳಕ ಹರಿಸಿ ತಮವ ದೂರ ಸರಿಸು…
ರಣಘೋಷ ಮೂಡಿಹುದು ರಣಕಹಳೆ ಮೊಳಗಿಹುದು,
ತರುಣ ರಕ್ತದ ಕಣದಿ ಸಿಡಿಲ ತರಿಸು… || 1 ||
ಏಕತೆಯ ತೊರೆದಿಹರು ಸಂಸ್ಕೃತಿಯ ಮರೆತಿಹರು,
ಹಿಂದು ಮಂತ್ರವ ಪಠಿಸು ನಾಡಿಗೆಲ್ಲ…
ಮೈಮರೆತು ಮಲಗಿಹರು ಬಲಭೀಮ ಹನುಮರು,
ಪಾಂಚಜನ್ಯವ ನುಡಿಸು ವಿಶ್ವಕೆಲ್ಲ… || 2 ||
ಸ್ವಾರ್ಥ ಜಡತೆಗಳಿಂದ ಬಸವಳಿದ ರಾಷ್ಟ್ರಕ್ಕೆ,
ಬೇಕಿಂದು ಭರವಸೆಯ ಪ್ರಖರ ಬೆಳಕು…
ಹೋಮವಾಗಲಿ ಸ್ವಾರ್ಥ ನಾಶವಾಗಲಿ ಜಡತೆ,
ಆಜ್ಯವಾಗಲಿ ನಮ್ಮ ಕ್ಷಣಿಕ ಬದುಕು… || 3 ||