ಕೇಳಿರಿದೋ ಹರಿಯಿತು ಪರದಾಸ್ಯದ ಬಂಧನವು

ಕೇಳಿರಿದೋ! ಹರಿಯಿತು ಪರದಾಸ್ಯದ ಬಂಧನವು
ದುಮದುಮಿಸುತಲಿಹುದೋ ರಾಯಗಡ ಸ್ಪಂದನವು || ಪ ||

ದುರ್ಗಕೆ ಶೋಭೆಯಾಗಿದೆ ಹಬ್ಬದ ವಾತಾವರಣ
ನಾಲ್ದೆಸೆಗೂ ರಂಗೋಲೆ ಶುಭ ತೋರಣದಾಭರಣ
ಎಲ್ಲೆಡೆಗೂ ಹರಡಿತು ಆನಂದವೆ ಆನಂದ || 1 ||

ಅಂಬರದೊಳು ಭಗವಾ ಹಾರಾಡಿದೆ ಡೌಲಿನಲಿ
ಧ್ವಜರಕ್ಷಣೆಗಾಗಿ ಸೈನ್ಯವಿದೆ ಠೀವಿಯಲಿ
ತೋಪಿನ ಗರ್ಜನೆಯು ಪ್ರತಿದನಿಸಿದೆ ಕ್ಷಿತಿಜದಲಿ || 2 ||

ಕಿಲ್ಲೆಯ ದರವಾಜ ಹೊರಳಿದೆ ದಿಲ್ಲಿಯ ಕಡೆಗೆ
ಶಿವರಾಯನ ಮನದ ಬಯಕೆಯ ಗ್ರಹಿಸಿದ ಹಾಗೆ
ಉಳಿದಿಲ್ಲವು ದೂರ ಈಗ ಸಿಂಧ ಕಾಶ್ಮೀರ || 3 ||

ಹೊಸ ಸ್ಫೂರ್ತಿಯ ಪಡೆದು ಹಿಗ್ಗಿತು ಹಿಂದುಸಮಾಜ
ದುಷ್ಟರ ಹೃದಯವನು ಕಂಪನಗೊಳಿಸಿತು ಭೀತಿ
ಮರೆಸಿಕೊಂಡರು ಮುಖವ ಕೊಬ್ಬಿದ ಶತ್ರುಗಳೀಗ || 4 ||

ಹೊಸ ಯುಗ ಸಾರುತಲಿ ಭೇರಿಯು ಮೊರೆದಿಹುದಿಂದು
ಏರಿದನು ಶಿವಾಜಿ ಸಿಂಹಾಸನಕೈತಂದು
ಬೆಳಗುತಲಿಹುದಾತನ ನಿರ್ಮಲ ಕೀರ್ತಿಯ ತೇಜ || 5 ||

ಸಾರ್ಥಕವಾಗಲೆಂದು ಹಿಂದುಸ್ಥಾನದ ಹೆಸರು
ಯಾರೆಲ್ಲರು ಪ್ರಾಣವ ಈಡಾಡಿದರೋ ಅಂದು
ಅವರೆಲ್ಲರ ತ್ಯಾಗದ ಫಲವೀ ಸಿಂಹಾಸನವು || 6 ||

Leave a Reply

Your email address will not be published. Required fields are marked *