ಕೇಳದೊ ! ಗಿರಿಗಹ್ವರದಿಂದೇಳುತ ಗರ್ಜಿಸುತಿರುವ ಸಮೀರ
ಭಾರತಮಾತೆಯ ಕಾವಲುಪ್ರಹರಿಯ ಪ್ರಲಯಂಕರ ಹೂಂಕಾರ || ಪ ||
ಚೇತನಚಿಲುಮೆಯ ಶತಶತ ಧಾರೆಯ ರುಂದ್ರ ಪ್ರವಾಹವೆ ಹರಿದು
ವಿಘ್ನ ವಿರೋಧವ ತೇಲಿಸಿ ಮುಳುಗಿಸಿ ಕೊಳೆ ತೊಳೆಯುತ ಭೋರ್ಗರೆದು
ನಾಡಿನ ನರನಾಡಿಗಳೊಳು ನಡೆದಿದೆ ನವ ವಿಪ್ಲವ ಸಂಚಾರ || 1 ||
ಕರಕರದಲಿ ಮಿಂಚಲಿ ಹೊರನೆಗೆಯಲಿ ಕಾಪಿನ ಖಡ್ಗ ಕಠಾರಿ
ರಕ್ಷಿತವಾಗಲಿ ಶುಭಕೃತಿ ಸಂಸ್ಕೃತಿ ಅರಿದನುಜರ ಶಿರ ಹಾರಿ
ಶಿಲೆ ಶಿಲೆ ಸಿಡಿದಿದೊ ಬಿರುಗಣ್ ಬಿಡಲಿದೆ ನರಸಿಂಹನ ಅವತಾರ || 2 ||
ಜನತಾಕೋಟಿಯ ಹೃತ್ಸಾಮ್ರಾಜ್ಯದ ಸುರಸಿಂಹಾಸನ ಸೇರಿ
ಏರಲಿ ಧ್ವಜ ಮೊರೆಯಲಿ ಭೇರಿ ನಗಾರೀ ರಣಕಹಳೆ ತುತ್ತೂರಿ
ಜಯ ಮೃತ್ಯುಂಜಯ ಭಾರತವೆನುತಿರೆ ಗೃಹಗೃಹದ್ವಾರದ ವೀರ || 3 ||