ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು || ಪ ||
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ
ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು
ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು || 1 ||
ಕರೆವ ಕೈಗಿಹುದಿದೋ ಕನಸುಗಳ ಹರಕೆ
ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ
ಜಾತಿ ಮತ ಭೇದಗಳ ಕಂದಕವು ಸುತ್ತಲೂ
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು
ರೂಢಿರಾಕ್ಷನರಸು ಗೈಯುವನು
ತೋಳ್ತಟ್ಟಿ ತೊಡೆ ತಟ್ಟಿ ಕರೆಯುವನು ಸಂಗ್ರಾಮಕೆ
ನಾವು ಹಿಂದೆಗೆವೆವೇ ? ವೀರ ತರುಣರು ನಾವು
ಒಂದೆ ನೆಗೆತಕೆ ನೆಗೆವೆವೋ ಕಂದಕವನು
ಕುಟ್ಟಿ ಪುಡಿ ಮಾಡುವೆವು ಕೋಟೆಗಳನು
ಎದೆಯ ಮೆಟ್ಟಿ ಮುರಿಯುವೆವಸುರ ರಟ್ಟೆಗಳನು
ಕೋಟೆ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು || 2 ||
ನಮ್ಮ ಸಾವು ನೋವೇ ಹೊಸನಾಡ ತೊಟ್ಟಿಲು ಆದಾವು
ಅಂಜುವೆದೆ ನಮ್ಮದಲ್ಲ. ಸೋಲ ಬಗೆ ವೀರನಿಗೆ ಸಲ್ಲ ಹೊಲ್ಲ
ಎಡರುಗಳ ಕಡಲುಗಳನೀಸಿ ಬರುವೆವು
ಘೋರ ನೈರಾಶ್ಯದಗ್ನಿ ಮುಖದಲ್ಲು ಕೂಡ
ಹೊಕ್ಕು ಹೊರಡುವ ಎಲ್ಲ ಒಡಕುಗಳ ತೊಡಕುಗಳ
ಬಿಡಿಸಿ. ಇಡಿಗೊಳಿಸಿ ಕಟ್ಟುವೆವು ನಾಡ.
ಇಂದು ಬಾಳ ಕಾಳಗದಿ ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ
ಅನ್ನದನ್ಯಾಯ ದಾವಾಗ್ನಿಯಲಿ ಕರಗುತಿದೆ ನರತೆ, ಪ್ರೀತಿ, ಸಂಸ್ಕೃತಿ
ದಿವದ ಬಯಕೆ || 3 ||
ಇದುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮ ಸುಖದ, ಸಮ ದುಃಖದ, ಸಮ ಬಗೆಯ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು ನಮ್ಮ ನಾಡು || 4 ||