ಕರುಣಾಳು ದೇವನವ ನರಜನುಮ ಕೊಟ್ಟಿರಲು
ಪರಹಿತವ ಬಯಸುತ್ತಾ ಮನುಜರಾಗೋಣ || ಪ ||
ಪರಮಾತ್ಮ ಸೃಷ್ಟಿಸಿಹ ಎಲ್ಲಾ ಜೀವಿಗಳನ್ನು
ಎಲ್ಲೆಲ್ಲೂ ಎಲ್ಲರೊಳು ಆ ದೇವನಿರಲು
ದೂರ ಸರಿಯುವ ಕ್ರೌರ್ಯ ಸರಿಯೇನು ಹೇಳಿ ?
ತರತಮದ ಭಾವವಿದು ಬಲು ಕೆಟ್ಟ ಚಾಳಿ || 1 ||
ಬೆರಳತುದಿ ಹೊರಳಿಸಿಯೇ ವಿಶ್ವವನೇ ಕಂಡರೂ
ಕೀಳುಭಾವನೆ ಹುಳುಕು ಬಿಡಲಾರವೇಕೆ ?
ಅಂತರ್ಜಾಲವನರಿತು ಅಂತರಾಳವೆ ಬರಿದು
ನೊಂದ ಮನಗಳ ಅಳಲ ತಿಳಿಯವೇಕೆ ? || 2 ||
ಕೆಟ್ಟ ಕಟ್ಟಳೆಯೆಲ್ಲಾ ಸುಟ್ಟು ಹೋಗಲಿ ಉರಿದು
ಸ್ವಚ್ಛ ನರನಾಡಿಯಲಿ ಹರಿದಾಡಿ ಬಲವು
ಮೌಢ್ಯಜಾಡ್ಯಗಳೆಲ್ಲ ಅಳಿದು ಹೋಗಲಿ ತೊರೆದು
ಐಕ್ಯತೆಯ ಬಂಧದಲಿ ಅರಳಿ ನಲಿವು || 3 ||
ಸಮರಸದ ಗಂಗೆಯಲಿ ಮಿಂದು ಪಾವನರಾಗಿ
ಮನಮನದ ತೆರೆ ಸರಿಸಿ ಬೆಳಕು ಹರಿಸೋಣ
ಕನಿಕರಕೂ ಮಿಗಿಲಾಗಿ ಸ್ನೇಹಸೌರಭ ಸೂಸಿ
ಮನುಜಧರ್ಮದ ಹಿರಿಮೆ ಜಗಕೆ ಸಾರೋಣ || 4 ||