ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ
ಗುಡುಗಿತು ನಭೋಮಂಡಲ
ರಾಮನ ನೆಲದಿಂದ ಧರ್ಮದ ನೆಲೆಯಿಂದ
ಬೆಳಗಲಿ ಭೂಮಿಯಂಗಳ
ರಾಮನಾಮದಿ ಬೆಳಗಲಿ ಭೂಮಿಯಂಗಳ || ಪ ||
ಸಾಮಗಾನದ ಶೃತಿಗಿಹುದೇ ಲಯ
ಸಾಮರಸ್ಯದ ಕೃತಿಗೆಲ್ಲಿಯ ಕ್ಷಯ
ವಿಷಮದ ವ್ಯಾಪಾರ ವಿಶ್ವದಿ ನಶಿಸಲಿ
ರಸಪೂರ್ಣವೆನಿಸಲಿ ಈ ತಾಯ್ನೆಲ || 1 ||
ಜಡತೆಯ ವಂಶಕೆ ವಜ್ರಾಘಾತ
ಜಾಗೃತ ಜ್ವಾಲೆಗೆ ಝಂಝೂವಾತ
ನಿದ್ರೆಯ ಮುದ್ರೆಯ ಒದ್ದೋಡಿಸುತಾ
ಸದ್ದನು ಮರೆಯಲಿ ಸ್ವರಸಂಕುಲ || 2 ||
ಉಜ್ವಲ ಸಂಸ್ಕೃತಿ ಉದ್ದೀಪಿಸಿದೆ
ಉತ್ಕರ್ಷಕೆ ಜಗ ಉಡ್ಡಯಿಸುತಿದೆ
ಉತ್ಥಾನದುತ್ಸಾಹ ಜನರೆದೆ ತುಂಬಿದೆ
ಉಜ್ಜಗಿಸುತಲಿದೆ ಸನ್ಮಂಗಳ || 3 ||