ಕರ್ಮಯೋಗಿ ಧೀಮಂತ ಸಂತ ನಿನ್ನ ನೆನಪಿಗೆ

ಕರ್ಮಯೋಗಿ ಧೀಮಂತ ಸಂತ ನಿನ್ನ ನೆನಪಿಗೆ
ಅನಂತದಲ್ಲಿ ಲೀನವಾದ ನಿನ್ನ ಬಾಳಜ್ಯೋತಿಗೆ
ಅಶ್ರುಪೂರ್ಣ ತರ್ಪಣ ಭಾವಸುಮಗಳರ್ಪಣ
ತರುಣ ಹೃದಯ ಸ್ಪಂದನ ಕೋಟಿಕೋಟಿ ವಂದನಾ || ಪ ||

ಸ್ವಾರ್ಥವನ್ನು ಮೆಟ್ಟಿ ನೀ ಧ್ಯೇಯಪಥದಿ ಸಾಗಿದೆ
ಸಾರ್ಥಕತೆಯ ಗುರಿಯೆಡೆ ಕೀರ್ತಿಯನ್ನು ಬಯಸದೆ
ಪದವಿ ಪದಕವೆಲ್ಲವ ಮಾತೆಯಡಿಗೆ ಚೆಲ್ಲಿದೆ
ನಾಡಿಗಾಗಿ ಶ್ರಮಿಸಿದೆ ಕ್ಷಣವಿರಾಮವಿಲ್ಲದೆ || 1 ||

ಗಟ್ಟಿನೆಲದಿ ಸೇವೆಯ ಪುಟ್ಟಸಸಿಯ ನೆಟ್ಟಿಹೆ
ಬೆವರು ರಕ್ತ ಹರಿಸುತಾ ದಿಟ್ಟತನದಿ ಬೆಳೆಸಿದೆ
ವರುಷ ಹತ್ತು ಉರುಳಿದೆ ಸುಮನರಾಶಿ ಅರಳಿದೆ
ಕಂಪು ಸೂಸುತಿರಲು ನೀನು ದೂರ ತೆರಳಿದೆ || 2 ||

ಬತ್ತಿಯಂತೆ ಉರಿದೆ ನೀ ಎತ್ತಿಧ್ಯೇಯದಾರತಿ
ರಾಷ್ಟ್ರಯಜ್ಞದುರಿಯಲಿ ನೀಡಿ ಪ್ರಾಣದಾಹುತಿ
ಧನ್ಯೆ ನಿನ್ನ ಜನನಿಯು ಧನ್ಯೆ ತಾಯಿ ಭಾರತಿ
ಧನ್ಯ ನಿನ್ನ ಛಾಯೆಯಲ್ಲಿ ಬೆಳೆದ ವೀರಸಂತತಿ || 3 ||

ಕಣ್ಣೀರ ಹರಿಸುತಾ ಕಾರ್ಯವನ್ನು ಮರೆಯೆವು
ನಿನ್ನ ಬಾಳ ಬೆಳಕಿನಲ್ಲಿ ಕರ್ಮಪಥದಿ ನಡೆವೆವು
ಆ ಅಪೂರ್ಣ ಸ್ವಪ್ನವೆಲ್ಲ ಭರದಿ ರೂಪು ತಳೆಯಲಿ
ಅಮರ ಅಜಿತ ಆತ್ಮಕೆ ಅದುವೆ ಶ್ರದ್ಧಾಂಜಲಿ || 4 ||

(ದಿವಂಗತ ಅಜಿತಕುಮಾರರಿಗೆ ಶ್ರದ್ಧಾಂಜಲಿ)

Leave a Reply

Your email address will not be published. Required fields are marked *