ಕಲ್ಪನೆಯ ಹಕ್ಕಿ ಗರಿಬಿಚ್ಚಿ ಆಗಸದಿ ಕೊರಳೆತ್ತಿ ಸಾರುತಿದೆ ಕೇಳಿ
ಸ್ವಾಗತಕೆ ಕಾದಿಹೆವು ಪರಿವರ್ತನೆಯ ಕಾಲ
ಸಾಕಿನ್ನು ಜಡತೆ ಎದ್ದೇಳಿ
ಮೇಲೆದ್ದು ನಿಲಲಿ ಪೌರುಷವೇ ಮೈದಾಳಿ || ಪ ||
ನಾಡಸೇವೆಯ ಪಥದಿ ನೆರಳು ನಿಲುಗಡೆಯಿಲ್ಲ
ಪಾಂಚಜನ್ಯವು ಮೊಳಗೆ ಕ್ಲೈಬ್ಯ ಸಲ್ಲ
ಸಾಮರಸ್ಯದ ಸುಧೆಯ ಹರಿಸುವ ಭಗೀರಥರು
ಪೂರ್ಣತೆಯ ಪಡೆವನಕ ನಿಲುವರಲ್ಲ || 1 ||
ಡಂಭರವು ಧನಭವನ ಸೌಖ್ಯ ತಂತ್ರಜ್ಞಾನ
ಅರ್ಥ ಕಾಮವೇ ವಿಕಾಸವಲ್ಲ
ಅಂಬರವನಾಳುವೆವು ಅಂಗಳದ ನೆಲೆಬಿಡದೆ
ಧರ್ಮ ಸಂಸ್ಕೃತಿಗೆ ಪರ್ಯಾಯವಿಲ್ಲ || 2 ||
ಕುಟಿಲಮತ ಕ್ರೂರಮತಿ ಭೋಗವಾದಕೆ ಸಿಲುಕಿ
ಘಾಸಿಗೊಂಡಿದೆ ಅಖಿಲ ಜೀವಜಾತ
ಕೋಟಿಭುಜಗಳ ಬಲಿದು ಅಸುರತನ ಸದೆಬಡಿದು
ಹಾಡಿ ಮೃತ್ಯುಂಜಯರೇ ವಿಜಯಗೀತ || 3 ||