ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು
ಇಂದು ಹಿಂದು ಭಾಸ್ಕರನ ಉದಯಕಾಲ
ನಾಡ ಪರಿವರ್ತನೆಯ ಪರ್ವಕಾಲ || ಪ ||
ಉಷೆಯುದಿಸಿ ಬಂದಿಹಳು, ನಿಶೆಯುಸಿರ ನೀಗಿಹಳು
ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳು
ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು
ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು || 1 ||
ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು
ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು
ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ
ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು || 2 ||
ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು?
ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು?
ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ
ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ || 3 ||
ಮುರಿದಿರಲು ಸಂಧಾನ, ಕರೆದಿರಲು ಸಂಗ್ರಾಮ
ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ
ರಾಮರಾಜ್ಯದ ರಚನೆ ಗೈದ ಶುಭ ಹಾರೈಕೆ
ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ || 4 ||