ಜಯತು ಜಯತು ಭಾರತ…… ಜಯತು ಜಯತು ಭಾರತ
ಈ ತಾಯ್ನಾಡಿನಾ ಮಕ್ಕಳು ನಾವು
ಈ ಮಣ್ಣಿನಾ ಮಡಿಲಿನಾ ಕುಡಿಗಳು ನಾವು
ಭರತಭೂಮಿಯ ಕೀರ್ತಿ ಪಥವನು
ನಭದತ್ತ ಒಯ್ಯುವ ಕುವರರು ನಾವು || ಪ ||
ಗಂಗೆ ತುಂಗೆ ಹರಿಯುವ ಪುಣ್ಯನಾಡಿದು
ಕಂಗು ತೆಂಗು ಬೆಳೆಯುವ ಹಸುರುಹೊನ್ನಿದು
ಶಿಲ್ಪಕಲೆಯ ಬೆಡಗಲ್ಲಿ ಬೆಳೆದ ಬೀಡಿದು
ಹಿಮಾದ್ರಿಯ ಶಿಖರದಿಂದ ಕಂಗೊಳಿಪನಾಡಿದು || 1 ||
ವಿವಿಧ ಜಾತಿ ವಿವಿಧ ಪಂಥ ವಿವಿಧ ಭಾಷೆಯು
ವಿವಿಧ ಕಲೆ ವಿವಿಧ ಬೆಳೆ ವಿವಿಧ ವೇಷವು
ವಿವಿಧತೆಯಲಿ ಏಕತೆಯ ಸಾಮರಸ್ಯವು
ಸಮಾನತೆ ಸಮರಸತೆ ವಿಶ್ವ ಪ್ರೇಮ ಮಂತ್ರವು || 2 ||
ನಾಡಿಗಾಗಿ ಕಾದಿದ ಕ್ರಾಂತಿವೀರರು
ಮನುಜಧರ್ಮ ಸಾರಿದ ಸಾಧುಸಂತರು
ಸಂಸ್ಕೃತಿಯ ಸತ್ವಮೆರೆದ ಧೀರಪುರುಷರು
ಸಂಕ್ರಾಂತಿಯ ನವಯುಗದ ರಾಷ್ಟ್ರಕ್ಕಾಗಿ ದುಡಿದರು || 3 ||