ಜಯ ಜಯ ಭಾರತ ದೇಶ || ಪ ||
ಮುಗಿಲನು ನಿಲುಕಿದ ಚೆಲುವು ಹಿಮಾಚಲ
ಸಿಂಧು ಸುರನದಿ ಸದಮಲ ಸಲಿಲ
ಎಡಬಿಡದೆಲೆ ನಿನ್ನಡಿ ತೊಳೆಯುತಲಿ
ತುಂಬಿದೆ ಹಿಂದು ಮಹಾಸಾಗರ ಜಲ
ನಿನ್ನಯ ಮೇಲ್ಮೆಯ ಗೆಲುವಿನ ಗುಡಿಯು
ಮೆರೆಯಲಿ ದೇಶ ವಿದೇಶ || 1 ||
ಮಾ ಸ್ವತಂತ್ರ ನೀ ಸುತರಿಗೆ ಸತತ
ನೀಡಿದೆ ಸದ್ಧರ್ಮದ ಜಯ ಪಂಥ
ಅದರಿಂದಾಗಲಿ ಈ ಜಗ ಶಾಂತ
ಸೌಖ್ಯ ಸಮೃದ್ಧ ಸ್ವತಂತ್ರವನಂತ
ಮೈ ತಾಳುತ ಪುನಃ ಕೇಳ್ಬರಲಿಂದು
ಗೀತೆಯ ಮಹದುಪದೇಶ || 2 ||
ನಿನ್ನಯ ಸರಿಸಮ ಯಾರಿಹರಿಂದು ?
ಸಮತೆಯ ಸದ್ಗುಣ ಯಾರಲ್ಲಿಹುದು ?
ನಿನ್ನಯ ನಿಬಿಡದ ಮಮತೆಯ ಪಡೆದು
ಬಹು ದೇಶಗಳಿವೆ ಸುಖದಲಿ ಬೆಳೆದು
ಅಕ್ಕರೆ ತೆರೆದುಡಿಯಲಿ ನಲಿದಿರಲಿ
ಬ್ರಹ್ಮಾ ವಿಷ್ಣು ಮಹೇಶ || 3 ||