ಜ್ವಾಲಾಮುಖಿಯ ಗರ್ಭದಲಿ | ನಿದ್ರಿಸುತಿಹ ಸುಕುಮಾರ |
ನೀದಾವಾನಲ ರೂಪವ ಧರಿಸಿ | ಪ್ರಕಟಗೊಳ್ಳು ಬಾರಾ ||
ಧೀರಾ ಪ್ರಕಟಗೊಳ್ಳು ಬಾರಾ || ಪ ||
ನಿನ್ನಯ ಶಕ್ತಿಯ ನೀನೇ ಮರೆತೆ | ಸುಖವೈಭೋಗದಿ ನೀ ಮೈಮರೆತೆ ||
ಅರಿಗಳ ಸಂಚಿನ ಸುಳಿಯೊಳು ಸಿಲುಕಿ | ಗೈದೆ ಕಳಂಕಿತ ನಾಡಿನ ಚರಿತೆ || 1 ||
ಸುರನದಿಯನು ಧರೆಗಿಳಿಸಿದ ಧೀರ | ಸಿಂಹವ ಮಣಿಸಿದ ಭರತ ಕುಮಾರ ||
ಛತ್ರಪತಿಯ ನಿಜ ವಾರಸುದಾರ | ನವನಿರ್ಮಾಣಕೆ ನೀನಾಧಾರ || 2 ||
ವಿಶ್ವಕೆ ಬೆಳಕನು ನೀಡಿದೆ ಅಂದು | ಕತ್ತಲ ಕೂಪದಿ ಮುಳುಗಿಹೆ ಇಂದು ||
ದೈವತ್ವದ ಆರಾಧಕ ನೀನು | ಅಸುರತ್ವಕೆ ಶರಣಾಗದಿರೆಂದು || 3 ||
ನೀ ಮೇಲೆದ್ದರೆ ನಾಡೇಳುವುದು | ಶೌರ್ಯ ಪರಾಕ್ರಮ ಮೈತಾಳುವುದು||
ಮುಗಿಲನು ಚುಂಬಿಸಿ ನೀ ಭುಗಿಲೇಳು | ಜಡತೆಯ ಸುಟ್ಟುರಿಸುತ ಸಿಡಿದೇಳು || 4 ||