ಜನ್ಮವ ತಳೆದಿದೆ ಜನರೊಳು ಬೆಳೆದಿದೆ

ಜನ್ಮವ ತಳೆದಿದೆ ಜನರೊಳು ಬೆಳೆದಿದೆ
ಸಾಕಾರದಿ ಸಮಗ್ರ ಕ್ರಾಂತಿ
ಮೋsಡದೊಡಲಿನ ಕ್ರಾಂsತಿಸೂರ್ಯನ
ಬಿಡುಗಡೆಯೇ ನಿಜಸಂಕ್ರಾಂತಿ || ಪ ||

ಜನತಂತ್ರವ ಉಸಿರಾಡುವ ಮನೆಗಳ
ದೀಪವನಾರಿಸುವ ಪ್ರಯತ್ನ
ನಡೆಸಿದೆ ದುಶ್ಯಾಸನ ಮನೆಯೊಲೆಗಳ
ಬೆಂಕಿಯ ಅಳಿಸುವ ಶತಯತ್ನ || 1 ||

ಸ್ವಾತಂತ್ರ್ಯದ ಬೆಂಕಿಯು ಮೃತ್ಯುಂಜಯ
ಎಂದೆಂದಿಗು ತಾ ಅವಿನಾಶಿ
ಮನೆಯೊಳು ಆರಿದವೊಲು ತೋರಿದರೂ
ಮನದೊಳು ಉರಿದಿದೆ ಧಗಧಗಿಸಿ || 2 ||

ನಂದದ ಚ್ಯುತಿ ಹೊಂದದ ವಡಬಾನಲ
ಹಿಂಸೆಯ ಕಡೆಗೋಲಿಗೆ ಸಿಲುಕಿ
ಎದೆ ಕೆಚ್ಚಾಗುತ ಕಾಳ್ಗಿಚ್ಚಾಗುತ
ಕಿಡಿಗೆದರಿದೆ ದಾಸ್ಯವ ನೆಕ್ಕಿ || 3 ||

ದಬ್ಬಾಳಿಕೆ ದಮನಕೆ ಕೊಡುವೆವಿದೋ
ಕೊಟ್ಟೆವಿದೋ ಕೊನೆಯೆಚ್ಚರಿಕೆ
ಧೀರಶಪಥ, ದೃಢವ್ರತ ತೊಡುವೆವಿದೋ
ತೊಟ್ಟೆವಿದೋ ದೈವಕೆ ಹರಕೆ || 4 ||

Leave a Reply

Your email address will not be published. Required fields are marked *